Koragajja: ಕೊರಗಜ್ಜ ಸಿನಿಮಾ ಶೂಟಿಂಗ್ ಸಂದರ್ಭ ದೈವಾರಾಧನೆ ತಂಡದಿಂದ ಅಡ್ಡಿ; ಚಿತ್ರೀಕರಣ ಸ್ಥಗಿತ!
Koragajja movie: ಸುಧೀರ್ ಅತ್ತಾವರ ನಿರ್ದೇಶನದಲ್ಲಿ ʼಕೊರಗಜ್ಜʼ ಸಿನಿಮಾ (Koragajja Movie) ದ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ದೈವಾರಾಧನೆ ಮಾಡುವ ಸಮುದಾಯದಿಂದ ದಾಂಧಲೆ ನಡೆದಿದೆ ಎನ್ನಲಾಗಿದೆ. ಕುದುರೆಮುಖ ಸಮೀಪದ ಕಳಸದಲ್ಲಿ ಮೈದಾಡಿ ಗುಡ್ಡದಲ್ಲಿ "ಕೊರಗಜ್ಜ" ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು.
ಮೂಲಗಳ ಪ್ರಕಾರ, ಕನ್ನಡ ಸಿನಿಮಾದ ಶೂಟಿಂಗ್ ವೇಳೆ ಕಾನೂನು ಮೀರಿ ದೈವದ ಕೃತಕ ಕೊಡಿಯಡಿ ನಿರ್ಮಿಸಿ, ಕೃತಕ, ವೇಷಭೂಷಣ ಇತ್ಯಾದಿ ಧರಿಸಿಕೊಂಡು ಸಿನಿಮಾ ತಂಡ ಶೂಟಿಂಗ್ ಮಾಡುತ್ತಿತ್ತು ಎನ್ನಲಾಗಿದೆ. ಈ ವಿಚಾರ ಅರಿತ ಚಿಕ್ಕಮಗಳೂರು ವಲಯದ ನಲ್ಕೆ ಸಂಘ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದು, ಅಷ್ಟರಲ್ಲಿ ಸಿನಿಮಾ ತಂಡ ತರಾತುರಿಯಲ್ಲಿ ಚಿತ್ರೀಕರಣಕ್ಕೆ ಹಾಕಿದ್ದ ಸೆಟ್‌ಗಳನ್ನು ತೆಗೆದು ಅರ್ಧಕ್ಕೆ ಶೂಟಿಂಗ್ ನಿಲ್ಲಿಸಿ ಅಲ್ಲಿಂದ ತೆರಳಿದೆ ಎನ್ನಲಾಗಿದೆ.
ಖ್ಯಾತ ಬಾಲಿವುಡ್ ಕೋರಿಯೋಗ್ರಾಫರ್ ಗಣೇಶ್ ಆಚಾರ್ಯ, ನಟಿ ಶುಭ ಪೂಂಜಾ (Shuba Poonja) ಮೊದಲಾದವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಯಾರಿಗೂ ಏನೂ ತೊಂದರೆ ಆಗಿಲ್ಲ. ಬದಲಿಗೆ ಸಿನಿಮಾ ಸೆಟ್ ನಾಶಗೊಂಡಿದೆ. ಶುಭ ಪೂಂಜಾ ನೃತ್ಯ ಮಾಡುತ್ತಿದ್ದಾಗ ಕೈ ಹಿಡಿದು ಎಳೆದಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಹಾಡಿನ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ದೈವ ಆರಾಧನೆ ಮಾಡುವ ಸಮುದಾಯದಿಂದ ಈ ರೀತಿ ಆಗಿದೆ ಎಂದು ನಿರ್ದೇಶಕ ಸುಧೀರ್ ಅವರು ಹೇಳಿದ್ದು, ಆವೇಶದಲ್ಲಿದ್ದ ಕೆಲವು ಮಂದಿ ಶೂಟಿಂಗ್ ಸೆಟ್‌ಗೆ ಬಂದಿದ್ದು, ನಂತರ ಇನ್ನೊಂದು ತಂಡ ಸೆಟ್‌ನ್ನು ಪರಿಶೀಲನೆ ಮಾಡಿದ್ದಾರೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾಗಿ ವರದಿಯಾಗಿದೆ.
ಹಲವು ಜನರು ಸೆಟ್‌ಗೆ ಒಮ್ಮೆಲೇ ನುಗ್ಗಿದ್ದಾರೆನ್ನಲಾಗಿದೆ. ಚಿತ್ರೀಕರಣಕ್ಕೆ ಪೊಲೀಸರ ಅನುಮತಿ ಪಡೆಯಲಾಗಿತ್ತು. ಲಕ್ಷಾಂತರ ಮೌಲ್ಯದ ಸೆಟ್ ಹಾಕಲಾಗಿತ್ತು. ಚಿತ್ರತಂಡದವರು ಪೊಲೀಸರಿಗೆ ದೂರು ನೀಡಿಲ್ಲ. ಈ ಘಟನೆ ಕುದುರೆ ಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನನಗೆ ನನ್ನ ಟೀಮ್ ಮುಖ್ಯವಾಗಿತ್ತು. ಮಂಗಳೂರಿನಲ್ಲಿ ಶೂಟ್ ಮಾಡುವಾಗಲೂ ಹೀಗೆ ಆಗಿತ್ತು. ಭೂತಾರಾಧನೆ ಕುರಿತು ಸಿನಿಮಾ ಮಾಡಬಾರದು ಎನ್ನುವ ಕಾರಣಕ್ಕೆ ಈ ರೀತಿ ಆಗಿದೆ ಎಂದೆನಿಸುತ್ತದೆ. ಕೊರಗಜ್ಜನ ಸಿನಿಮಾ ಮಾಡುತ್ತಿರುವ ಕಾರಣ ಈ ರೀತಿ ಮಾಡಲಾಗಿದೆ. ಬಹುಶಃ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎನ್ನಲಾಗಿದೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ.