Russia: ರಷ್ಯಾ ಅಧ್ಯಕ್ಷೀಯ ಚುನಾವಣೆ : ಮತ್ತೊಮ್ಮೆ ಭರ್ಜರಿ ಗೆಲುವು ದಾಖಲಿಸಿದ ವ್ಲಾಡಿಮಿರ್ ಪುಟಿನ್
ಭಾನುವಾರ ರಷ್ಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಅವರು ದಾಖಲೆಯ ಗೆಲುವನ್ನು ಸಾಧಿಸಿದ್ದಾರೆ.
ಇದನ್ನೂ ಓದಿ: Charmady: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ; ಟ್ರಾಫಿಕ್ ಜಾಮ್
ಚುನಾವಣೆಯಲ್ಲಿ ಪುಟಿನ್ ಅವರು ಶೇ. 87.17 ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಒಕ್ಕೂಟದ ಕೇಂದ್ರ ಚುನಾವಣಾ ಆಯೋಗದ ದತ್ತಾಂಶ ಉಲ್ಲೇಖಿಸಿ ಟಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮೂಲಕ ಪುಟಿನ್ ಅವರು ಅಧಿಕಾರದ ಮೇಲೆ ತಮ್ಮ ಹಿಡಿತವನ್ನು ಭದ್ರಪಡಿಸಿಕೊಂಡಿದ್ದಾರೆ. ಇದೇ ವೇಳೆ ಸಾವಿರಾರು ವಿರೋಧಿಗಳು ಮತದಾನ ಕೇಂದ್ರಗಳಲ್ಲಿ ಮಧ್ಯಾಹ್ನ ಪುಟೀನ್ ವಿರುದ್ಧ ಪ್ರತಿಭಟನೆ ನಡೆಸಿದರು.
1999 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಮಾಜಿ ಕೆಜಿಬಿ ಲೆಫ್ಟಿನೆಂಟ್ ಕರ್ನಲ್ ಪುಟಿನ್ ಅವರ ಈ ಫಲಿತಾಂಶವು ಪಶ್ಚಿಮದ ದೇಶಗಳಿಗೆ ದೊಡ್ಡ ತಲೆನೋವಾದಂತಾಗಿದೆ.
ಪೋಲ್ಸ್ಟರ್ ದಿ ಪಬ್ಲಿಕ್ ಒಪೀನಿಯನ್ ಫೌಂಡೇಶನ್ ( ಎಫ್ಒಎಂ ) ನಡೆಸಿದ ಚುನಾವಣಾ ಸಮೀಕ್ಷೆಯ ಪ್ರಕಾರ, ಪುಟಿನ್ ಮತಗಳ 87.8 % ಅನ್ನು ಗೆದ್ದಿದ್ದಾರೆ, ಇದು ರಷ್ಯಾದ ನಂತರದ - ಸೋವಿಯತ್ ಇತಿಹಾಸದಲ್ಲಿ ಅತಿ ಹೆಚ್ಚು ಫಲಿತಾಂಶವಾಗಿದೆ. ರಷ್ಯಾದ ಪಬ್ಲಿಕ್ ಒಪೀನಿಯನ್ ರಿಸರ್ಚ್ ಸೆಂಟರ್ ( ವಿಸಿಐಒಎಂ ) ಪುಟಿನ್ ಅವರು ಶೇಕಡಾ 87ರಷ್ಟು ಮತಗಳಿಸಿರುವುದಾಗಿ ತಿಳಿಸಿದೆ.
ಈ ಚುನಾವಣೆಯಲ್ಲಿ ಪುಟಿನ್ ವಿರುದ್ಧವಾಗಿ ಸ್ಪರ್ಧಿಸಿದ್ದ ಕಮ್ಯುನಿಸ್ಟ್ ಅಭ್ಯರ್ಥಿ ನಿಕೊಲಾಯ್ ಖಾರಿಟೋನೊವ್ ಕೇವಲ ಶೇಕಡಾ 4ಕ್ಕಿಂತ ಕಡಿಮೆ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ , ಇನ್ನು ಮೊದಲ ಬಾರಿ ಸ್ಪರ್ಧಿಸಿದ್ದ ವ್ಲಾಡಿಸ್ಲಾವ್ ಡಾವನ್ಕೋವ್ ಮೂರನೇ ಸ್ಥಾನದಲ್ಲಿ ಮತ್ತು ತೀವ್ರ ರಾಷ್ಟ್ರೀಯವಾದಿ ಲಿಯೊನಿಡ್ ಸ್ಲುಟ್ಸ್ಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ ಎಂದು ಫಲಿತಾಂಶಗಳು ಸೂಚಿಸಿವೆ.
ರಷ್ಯಾ ಚುನಾವಣೆಯ ಕುರಿತು ಮಾತನಾಡಿರುವ ಅಮೆರಿಕ "ಚುನಾವಣೆಗಳು ನಿಸ್ಸಂಶಯವಾಗಿ ಮುಕ್ತವಾಗಿ ಅಥವಾ ನ್ಯಾಯಯುತವಾಗಿ ನಡೆದಿಲ್ಲ. ಪುಟಿನ್ ರಾಜಕೀಯ ಎದುರಾಳಿಗಳನ್ನು ಬಂಧಿಸಿದ್ದಾರೆ ಮತ್ತು ಇತರರು ಆತನ ವಿರುದ್ಧ ಸ್ಪರ್ಧಿಸುವುದನ್ನು ತಡೆದಿದ್ದಾರೆ" ಎಂದು ಅಮೆರಿಕಾದ ವೈಟ್ ಹೌಸ್ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ತಿಳಿಸಿದ್ದಾರೆ.