ಕಡಬ:ಅನಾರೋಗ್ಯಪೀಡಿತ ಬಾಲಕಿಯ ನೆರವಿಗೆ ನಿಂತ ಪಿ.ಯು.ಸಿ ವಿದ್ಯಾರ್ಥಿ!! ಏಕಾಂಗಿ ಪ್ರಯತ್ನ-ಧನಸಂಗ್ರಹದ ಮಹಾತ್ಕಾರ್ಯಕ್ಕೆ ಮೆಚ್ಚುಗೆ!!
ಕಡಬ:ಸುಬ್ರಹ್ಮಣ್ಯ ಗುತ್ತಿಗಾರು ಸಮೀಪದ ವಳಲಂಬೆ ಎಂಬಲ್ಲಿನ ಅನಾರೋಗ್ಯ ಪೀಡಿತ ಬಾಲಕಿಯೊಬ್ಬಳ ನೆರವಿಗೆ ವಿದ್ಯಾರ್ಥಿಯೊಬ್ಬ ನಿಂತಿದ್ದು, ತನ್ನ ಕೈಲಾದಷ್ಟು ಸೇವೆ ನೀಡುವೆ ಎನ್ನುವ ಪಣ ತೊಟ್ಟು ಸಾರ್ವಜನಿಕವಾಗಿ ಧನ ಸಂಗ್ರಹ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಮರ್ದಾಳ ನಿವಾಸಿ ಸಂತೋಷ ಎಂಬ ಯುವಕನ ಪ್ರಯತ್ನ ಎಲ್ಲೆಡೆ ಸುದ್ದಿಯಾಗಿದ್ದು, ಎಲುಬಿನ ಕ್ಯಾನ್ಸರ್ ಗೆ ತುತ್ತಾಗಿರುವ ಬಾಲಕಿಯ ಚಿಕಿತ್ಸೆಗೆ ನೆರವಾಗಬೇಕೆಂದು ಪಣತೊಟ್ಟ ಸಂತೋಷ್ ಊರಿನಲ್ಲಿ ಧನ ಸಂಗ್ರಹಕ್ಕೆ ಮುಂದಾಗುತ್ತಾನೆ.
ಧನ ಸಂಗ್ರಹ ಮಾಡಿ ಮೆಚ್ಚುಗೆಗೆ ಪಾತ್ರವಾದ ವಿದ್ಯಾರ್ಥಿ ಸಂತೋಷ್
ತನ್ನ ಓದಿನ ಜೊತೆಗೆ ಬಿಡುವು ಸಿಕ್ಕಾಗ ಕೈಲಾದಷ್ಟು ಪ್ರಯತ್ನಿಸಿ, ಸ್ಥಳೀಯ ಹೋಟೆಲ್ ಒಂದರಲ್ಲಿ ಧನ ಸಂಗ್ರಹಕ್ಕೆ ಬೇಕಾಗಿ ಬಾಕ್ಸ್ ಒಂದನ್ನು ಇಟ್ಟ ಪರಿಣಾಮ ಸಾರ್ವಜನಿಕರು ಸಹಕಾರ ನೀಡಿದ್ದು, ಸದ್ಯ ಐದು ಸಾವಿರಕ್ಕೂ ಮಿಕ್ಕಿ ಹಣ ಹೊಂದಿಕೆಯಾದ ಹಿನ್ನೆಲೆಯಲ್ಲಿ ಬಾಲಕಿಯ ಮನೆಗೆ ತೆರಳಿ ಆಕೆಗೆ ಧನ ಸಹಾಯದ ನೆರವು ನೀಡುವ ಮೂಲಕ ಖುಷಿ ಕಂಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ, ಈ ಬಾರಿ ನನ್ನ ಸಣ್ಣ ಪ್ರಯತ್ನಕ್ಕೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಮುಂದೆಯೂ ಸಮಾಜ ಕಾರ್ಯದಲ್ಲಿ ತೊಡಗಿಕೊಳ್ಳಲು ಹೆಚ್ಚು ಆಸಕ್ತಿ ಬಂದಿದ್ದು, ಈ ಬಾರಿಯ ಸುಬ್ರಹ್ಮಣ್ಯ ಷಷ್ಠಿ ಸಂದರ್ಭ ಗೆಳೆಯರೊಂದಿಗೆ ಸೇರಿ ಬಾಲಕಿಯ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಧನಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ ಎಂದರು. ಸದ್ಯ ಸಂತೋಷ್ ನ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ವಿದ್ಯಾರ್ಥಿಯ ಪ್ರಯತ್ನ ಕಂಡ ಊರಿನ ಹಲವರು ಬಾಲಕಿಯ ನೆರವಿಗೆ ನಿಂತಿದ್ದಾರೆ ಎನ್ನುವ ಮಾಹಿತಿಗಳು ಮೂಲಗಳಿಂದ ತಿಳಿದುಬಂದಿದೆ.
:ದೀಪಕ್ ಹೊಸ್ಮಠ