CET ಮರು ಪರೀಕ್ಷೆ ? ಸರ್ಕಾರದ ಮುಂದಿದೆ ಈ ಎರಡು ಆಯ್ಕೆ
CET: ಎಂಜಿನಿಯರಿಂಗ್ ಸೇರಿ ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CET 2024) ಔಟ್ ಆಫ್ ಸಿಲಬಸ್ (Out Of Syllabus) ಪ್ರಶ್ನೆಗಳನ್ನು ಕೇಳಿರುವ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಮರು ಪರೀಕ್ಷೆ ನಡೆಸುವ ಆಯ್ಕೆ ಸರ್ಕಾರದ ಮುಂದಿದ್ದು, ಈ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಹೌದು, ಎಂಜಿನಿಯರಿಂಗ್ ಸೇರಿ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಏಪ್ರಿಲ್ 18 ಮತ್ತು 19ರಂದು ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್(Out Of Syllabus) ಪ್ರಶ್ನೆಗಳ ಕುರಿತಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶ ಈಗಾಗಲೇ ಭುಗಿಲೆದ್ದಿದೆ. 4 ವಿಷಯಗಳಲ್ಲಿ ಕನಿಷ್ಠ 45 ಪ್ರಶ್ನೆಗಳು ಕೈಬಿಟ್ಟ ಪಠ್ಯದಿಂದ ಬಂದಿರುವುದಾಗಿ ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆ ಪ್ರಶ್ನೆ ಎದುರಾಗಿದೆ. ಆದರೆ ಸರ್ಕಾರ ಮರು ಪರೀಕ್ಷೆ ನಡೆಸುತ್ತದೆಯೋ ಅಥವಾ ಗ್ರೇಸ್ ಅಂಕಗಳನ್ನು ನೀಡಲಾಗುತ್ತದೆಯೋ ಎಂಬ ಕುತೂಹಲ ವಿದ್ಯಾರ್ಥಿಗಳಲ್ಲಿ ಮೂಡಿದೆ. ಒಟ್ಟಿನಲ್ಲಿ ತಜ್ಞರ ಸಮಿತಿಯ ವರದಿ ಅನ್ವಯ ರಾಜ್ಯ ಸರ್ಕಾರವು ಇಂದು (ಸೋಮವಾರ ಏಪ್ರಿಲ್ 29) ನಿರ್ಧಾರ ಪ್ರಕಟಿಸುವ ಸಾಧ್ಯತೆ.
ತಜ್ಞರು ಅಭಿಪ್ರಾಯ ಏನು?
ಸಿಇಟಿ ಗೊಂದಲ ತನಿಖೆಗೆ ಸರ್ಕಾರದಿಂದ ನೇಮಕ ಮಾಡಿದ್ದ ನಾಲ್ವರು ವಿಷಯ ತಜ್ಞರ ಒಳಗೊಂಡ ಸಮಿತಿಯು ಪಠ್ಯದಿಂದ ಹೊರತಾದ ಪ್ರಶ್ನೆ ಕೇಳಿರುವುದನ್ನು ದೃಢಪಡಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕೃಪಾಂಕ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮರು ಪರೀಕ್ಷೆ ನಡೆಸುವುದು ಸೂಕ್ತ ಪರಿಹಾರವೆಂದು ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಅಲ್ಲದೆ ಪ್ರತಿ ಪತ್ರಿಕೆಯೂ 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎಷ್ಟು ಪ್ರಶ್ನೆಗಳು ಪಠ್ಯಕ್ಕೆ ಹೊರತಾಗಿವೆಯೋ ಅಷ್ಟು ಕೃಪಾಂಕ ನೀಡಬಹುದು. ಹಾಗೆ ನೀಡಿದರೆ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ಪಿಯು ಅಂಕಗಳನ್ನಷ್ಟೇ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಿದರೆ ಸಿಇಟಿ ಉದ್ದೇಶ, ಮಾಡಿದ ಖರ್ಚು ವ್ಯರ್ಥವಾಗುತ್ತದೆ. ಹಾಗಾಗಿ, ಮರು ಪರೀಕ್ಷೆ ನಡೆಸುವ ಅಥವಾ ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನಷ್ಟೇ ಮೌಲ್ಯಮಾಪನ ಮಾಡಿ ಶೇ.100ಕ್ಕೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲು ಕೆಇಎ(KEA) ಹಾಗೂ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.