Budget 2024: ಬಜೆಟ್ ನಲ್ಲಿ ಆಂಧ್ರ- ಬಿಹಾರಕ್ಕೆ ಭರ್ಜರಿ ಕೊಡುಗೆ ಕೊಟ್ಟ ಮೋದಿ ಸರ್ಕಾರ- ಏನೆಲ್ಲಾ ಸಿಕ್ತು ಗೊತ್ತಾ ?!!
Budget - 2024: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಕೇಂದ್ರ ಸಚಿವೆ ತಮ್ಮ ಏಳನೇ ಮುಂಗಡಪತ್ರದಲ್ಲಿ ದಾಖಲೆ ಬರೆದಿದ್ದಾರೆ. 48.21 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಇದರಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ ಸಾಕಷ್ಟು ಅನುದಾನ ನೀಡಲಾಗಿದ್ದರೂ ಸಮ್ಮಿಶ್ರ ಸರಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ JDU ಹಾಗೂ TDP ಆಡಳಿತದ ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಭರ್ಜರಿ ಕೊಡುಗೆ ನೀಡಲಾಗಿದೆ. ಹಾಗಿದ್ರೆ ಈ ಎರಡು ರಾಜ್ಯಗಳಿಗೆ ಸಿಕ್ಕ ಅನುದಾನವೇನು? ಇಲ್ಲಿದೆ ನೋಡಿ ಮಾಹಿತಿ.
ಹೌದು, 2024-25ನೇ ಸಾಲಿನ ಹಣಕಾಸು ವರ್ಷದ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ ಮೈತ್ರಿ ಧರ್ಮ ಪಾಲಿಸಿರುವುದು ನೂರಕ್ಕೆ ನೂರು ನಿಜ. ಮೈತ್ರಿ ದೋಸ್ತಿಗಳನ್ನು ಖುಷಿ ಪಡಿಸಲು ಸರ್ಕಾರ ಪ್ರಯತ್ನಿಸುರುದು ಸ್ಪಷ್ಟವಾಗಿ ಎದ್ದು ತೋರುತ್ತದೆ. ಒಟ್ಟಿನಲ್ಲಿ ಮೋದಿ 3.0 ರ ಬಜೆಟ್ 2024, ಅಗತ್ಯವಿರುವ ಎರಡು ರಾಜ್ಯಗಳಿಗೆ ಪ್ರಮುಖ ಯೋಜನೆಗಳನ್ನು ಮೀಸಲಿಟ್ಟಿದೆ.
ಆಂಧ್ರಪ್ರದೇಶಕ್ಕೆ ಏನು ಕೊಡುಗೆ?
* ಆಂಧ್ರದ ರಾಜಧಾನಿ ಅಭಿವೃದ್ಧಿಪಡಿಸಲು 15,000 ಕೋಟಿ ರೂ. ಅನುದಾನ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಘೋಷಿಸಿದ್ದಾರೆ. ಬಜೆಟ್ ಪೂರ್ವ ಸಭೆಯಲ್ಲಿ ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಿ ಅಮರಾವತಿ ನಿರ್ಮಾಣ ಮತ್ತು ಅಭಿವೃದ್ಧಿಗೆ 15,000 ಕೋಟಿ ಅನುದಾನ ಕೋರಿತ್ತು. ರಾಜ್ಯ ಸರ್ಕಾರದ ಪ್ರಮುಖ ಬೇಡಿಕೆಯನ್ನು ಈ ಪ್ರಕಟಣೆಯು ಪೂರೈಸಿದೆ.
* ಎಪಿ ಮತ್ತು ಅದರ ರೈತರಿಗೆ ಜೀವನಾಡಿಯಾಗಿರುವ ಪೋಲವರಂ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಹಣಕಾಸು ಒದಗಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ. ಇದರಿಂದ ನಮ್ಮ ದೇಶದ ಆಹಾರ ಭದ್ರತೆಗೂ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
* ಆಂಧ್ರ ಮರುಸಂಘಟನೆ ಕಾಯಿದೆ ಅಡಿಯಲ್ಲಿ, ಕೈಗಾರಿಕಾ ಅಭಿವೃದ್ಧಿಯನ್ನು ಬೆಂಬಲಿಸಲು, ನೀರು, ವಿದ್ಯುತ್ ಮತ್ತು ರಸ್ತೆಗಳಂತಹ ಮೂಲಭೂತ ಮೂಲಸೌಕರ್ಯಗಳನ್ನು ಬೆಂಬಲಿಸಲು ಸಹಾಯ ಮಾಡಲಾಗುತ್ತದೆ. ಅಭಿವೃದ್ಧಿ ಯೋಜನೆಗಳಿಗೆ ಬಂಡವಾಳ ವೆಚ್ಚಕ್ಕಾಗಿ ಹೆಚ್ಚುವರಿ ಹಂಚಿಕೆಯನ್ನು ಒದಗಿಸಲಾಗುವುದು ಎಂದೂ ಸಹ ಹೇಳಿದ್ದಾರೆ.
ಬಿಹಾರಕ್ಕೆ ಸಿಕ್ಕ ಕೊಡುಗೆ ಏನು?
* ಬಿಹಾರದಲ್ಲಿ ರಸ್ತೆ ಸಂಪರ್ಕವನ್ನು ಹೆಚ್ಚಿಸುವ ಗುರಿಯೊಂದಿಗೆ, ಪಾಟ್ನಾ ಮತ್ತು ಪೂರ್ಣಿಯಾ, ಬಕ್ಸರ್ ಮತ್ತು ಭಾಗಲ್ಪುರ್ ಹಾಗೂ ಬೋಧಗಯಾ, ರಾಜಗೀರ್, ವೈಶಾಲಿ ಮತ್ತು ದರ್ಬಂಗಾವನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್‌ವೇಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಇದಕ್ಕಾಗಿ ಸರ್ಕಾರ 2,600 ಕೋಟಿ ರೂ. ಮೀಸಲಿಟ್ಟಿದೆ.
* ರಾಜ್ಯವು ಬಕ್ಸಾರ್ ಜಿಲ್ಲೆಯಲ್ಲಿ ಗಂಗಾನದಿಯ ಮೇಲೆ ಎರಡು ಪಥದ ಸೇತುವೆಯನ್ನು ಪಡೆಯುತ್ತದೆ. ಭಾಗಲ್ಪುರದ ಪಿರ್ಪೈಂಟಿಯಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಸ್ಥಾವರವನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ.
* ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಿಹಾರದ ಗಯಾ ಮತ್ತು ರಾಜ್‌ಗೀರ್‌ನಲ್ಲಿ ದೇವಾಲಯದ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಘೋಷಿಸಿದ್ದಾರೆ.
* ರಾಜ್ಯದಲ್ಲಿ ಪ್ರವಾಹ ನಿಯಂತ್ರಣಕ್ಕೆ 11,500 ಕೋಟಿ ರೂ. ಆರ್ಥಿಕ ಬೆಂಬಲದ ಭರವಸೆ ಬಜೆಟ್‌ನಲ್ಲಿ ನೀಡಲಾಗಿದೆ.
ಒಟ್ಟಿನಲ್ಲಿ ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಕಾರಣರಾದ ಚಂದ್ರಬಾಬು ನಾಯ್ಡು (Chandrababu Naidu) ಹಾಗೂ ನಿತೀಶ್ ಕುಮಾರ್ (Nitish Kumar)ಅವರಿಗೆ ಈ ಬಾರಿಯ ಬಜೆಟ್ ಸಂತಸವನ್ನು ಉಂಟು ಮಾಡಿದೆ. ಈ ಮೊದಲೇ ಈ ಇಬ್ಬರೂ ಸಹ ತಮ್ಮ ರಾಜ್ಯಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹ ಮಾಡಿದ್ದರು ಎನ್ನಲಾಗಿದೆ.