ನೀವು ಸತ್ತ ನಂತರ ನಿಮ್ಮ ಪ್ರೀತಿ ಪಾತ್ರರು ಏನು ಮಾಡ್ತಾರೆ ಅಂತ ತಿಳ್ಕೊಬೇಕಾ ?!
ನೀವು ಸತ್ತು ಹೋಗ್ತೀರ. ದುರದೃಷ್ಟ ಅಂದರೆ ನೀವು ಸತ್ತು ಹೋದದ್ದು ಎಲ್ಲರಿಗೂ ತಿಳಿಯುತ್ತೆ; ನಿಮ್ಮನ್ನೊಬ್ಬರನ್ನು ಬಿಟ್ಟು ! ಹುಟ್ಟಿದಾಗ ಕೆಲವು ವರ್ಷ, ನಿಮ್ಮ ಬಗ್ಗೆ , ನಿಮ್ಮ ನಡಾವಳಿಗಳ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಅದು ಬಿಟ್ಟರೆ ಬದುಕಿನ ಇತರ ಎಲ್ಲ ಘಟನೆಗಳ ಬಗ್ಗೆ, ನಿಮ್ಮ ಸುತ್ತು ಮುತ್ತ ಮತ್ತು ನಿಮ್ಮ ಮನದೊಳಗೆ ಏನು ನಡೆಯುತ್ತಿದೆ ಎಂಬ ಬಗ್ಗೆ ನಿರಂತರ ಮಾಹಿತಿ ನಿಮಗೆ ಇದ್ದೇ ಇರುತ್ತದೆ. ಆದರೆ ನೀವು ಸತ್ರಿ ಅಂದ್ಕೊಳ್ಳಿ. ಆಗ ನಿಮಗೆ ಏನೂ ಗೊತ್ತಾಗಲ್ಲ. ಹಾಗಾಗಿ ನೀವು ಸಾಯುವ ಮುನ್ನ, ನೀವು ಸತ್ತ ನಂತರ ಏನಾಗುತ್ತದೆ, ನಿಮ್ಮ ಪ್ರೀತಿ ಪಾತ್ರರು ಏನೆಲ್ಲ ಮಾಡ್ತಾರೆ ಎಂಬ ಬಗ್ಗೆ ಒಂದು ಸಣ್ಣ ಮಾಹಿತಿ ಬದುಕಿರುವ ನಿಮಗಾಗಿ !
ನೀವು ಸತ್ತು ನೆಮ್ಮದಿಯಾಗಿ ಮಲಗಿದ್ದೀರಿ. ನಿಮ್ಮ ಕುಟುಂಬಸ್ಥರು ಆತ್ಮೀಯರು ಸ್ನೇಹಿತರು ನಿಮಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಅಳು ಜೋರಾಗಿದೆ. ನೀವು ಸತ್ತ ಸುದ್ದಿ ತಿಳಿದ ಆತ್ಮೀಯರು ನಿಮ್ಮ ಮನೆಗೆ ಭಾವಿಸಿ ಬರುತ್ತಾರೆ. ಅಳುವುದು ಸಂತೈಸುವುದು ನಡೆದೇ ಇದೆ. ಅಷ್ಟರಲ್ಲಿ ಕೆಲವರು ನಿಮ್ಮ ಅಂತಿಮ ಸಂಸ್ಕಾರಕ್ಕೆ ಬೇಕಾದ ವ್ಯವಸ್ಥೆ ಮಾಡಲು ತೊಡಗುತ್ತಾರೆ. ವಾಹನದ ವ್ಯವಸ್ಥೆ, ಸುಡಲು ಕಟ್ಟಿಗೆಯ ಒಟ್ಟುಗೂಡಿಸುವಿಕೆ, ಹೂಳುವ ಸಂಪ್ರದಾಯ ಇದ್ದರೆ ಅಂತವರಿಗೆ ಶವಪಟ್ಟಿಗೆಯ ವ್ಯವಸ್ಥೆ ಮತ್ತು ಶವ ಸಂಸ್ಕಾರದ ಜಾಗಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆ ನಡೆಸುವುದು ಶುರುವಾಗುತ್ತದೆ.
ಇಂತಹಾ ಕಾರ್ಯಗಳನ್ನು ಮಾಡಲು ಪ್ರತಿ ಕುಟುಂಬ ವ್ಯವಸ್ಥೆಯೊಳಗೆ ಕೆಲವರು ' ಅನುಭವಿಗಳು ' ಇದ್ದೇ ಇರ್ತಾರೆ. ಅವರೆಲ್ಲ ಇಂತಹಾ ಸುಮಾರು ಸಾವು ಕಂಡವರು !! ನಿಮ್ಮ ಸಂಸ್ಕಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಅವರು ನಿರ್ವಹಿಸುತ್ತಾರೆ.
ಇವೆಲ್ಲಕ್ಕಿಂತ ಮುಖ್ಯವಾಗಿ ನೀವು ಸತ್ತ ಕೂಡಲೇ ಅಲ್ಲಿ ಕಾಣಬರುವುದು ಒಂದು ತೆರನಾದ ಅವಸರ. ಆದಷ್ಟು ಬೇಗ ಹೆಣ ಎತ್ತಲು, ಅದನ್ನು ಕಣ್ಣೆದುರಿಗಿಂದ ದೂರ ಸಾಗಿಸಲು ತಯಾರಿ! ನೀವೀಗ ಸತ್ತು ಹೋದ ಕಾರಣದಿಂದಾಗಿ ಈಗಾಗಲೇ ನೀವು ನಿಮ್ಮ ಪ್ರೀತಿಯ ಹೆಸರನ್ನು ಕಳಕೊಂಡಿರುತ್ತೀರಿ. ನೀವೀಗ ಕೇವಲ ಹೆಣ. ಅಥವಾ ಸ್ಟೈಲಿಶ್ ಆಗಿ ನಿಮಗೆ ಕರೆಸಿಕೊಳ್ಳಬೇಕು ಎನ್ನಿಸಿದರೆ ನೀವು ಡೆಡ್ ಬಾಡಿ !!!
ಅಲ್ಲಿದ್ದವರಿಗೆ ಹಾಗೆ ಆದಷ್ಟು ತರಾತುರಿಯಲ್ಲಿ ನಿಮ್ಮನ್ನು ಸುಟ್ಟುಹಾಕಿ ಅಥವಾ ಹೂತು ಬಿಡುವ ಆತುರ. ಅದೂ ಆಯ್ತು, ನಿಮ್ಮ ಅಂತ್ಯಸಂಸ್ಕಾರವು ಕೂಡಾ ಆಯಿತು ಅಂದುಕೊಳ್ಳಿ: ಅಲ್ಲಿಂದ ಕೆಲವೇ ಗಂಟೆಗಳ ಅಂತರದಲ್ಲಿ, ಅಷ್ಟರವರೆಗೆ ಅಳುತ್ತಿದ್ದ ಜನರ ಅಳು ಹಠತ್ತಾಗಿ ಸತ್ತು ಹೋಗುತ್ತದೆ. ನಿಮ್ಮ ಫ್ಯಾಮಿಲಿಯು, ನಿಮ್ಮ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಕುಟುಂಬಸ್ಥರಿಗೆ ಮತ್ತು ಗೆಳೆಯರಿಗೆ ಊಟೋಪಚಾರದ ವ್ಯವಸ್ಥೆ ಮಾಡುವುದರಲ್ಲಿ ಬ್ಯುಸಿ ಆಗುತ್ತದೆ.
ಅಲ್ಲೇ ಕೆಲವರು ಕಾಫಿ ಕುಡಿಯುತ್ತಾ ಸುತ್ತಮುತ್ತ ನಡೆಯುವ ಸಾಮಾಜಿಕ, ರಾಜಕೀಯ ಆಗುಹೋಗುಗಳ ಬಗ್ಗೆ ಸಣ್ಣದಾಗಿ ಚರ್ಚೆ ನಡೆಸುತ್ತಾರೆ. ನಿಮ್ಮ ಕೆಲವು ಗೆಳೆಯರು ತಾವು ಖುದ್ದಾಗಿ ಅಂತ್ಯ ಸಂಸ್ಕಾರಕ್ಕೆ ಬರಲಾಗದನ್ನು ತಿಳಿಸಲು ನಿಮ್ಮ ಮನೆಯವರಿಗೆ ಕರೆ ಮಾಡುತ್ತಾರೆ. ಮತ್ತೆ ಕೆಲವರು ಸದ್ದಿಲ್ಲದೆ ತಾವು ವಾಪಸ್ ಹೊರಡಲು ಬೇಕಾದ ಟಿಕೆಟ್ ಬುಕಿಂಗ್ ಮಾಡುವುದರಲ್ಲಿ ನಿರತರಾಗುತ್ತಾರೆ. ಯಾಕೆಂದ್ರೆ ಲೈಫ್ ತುಂಬಾ ಶಾರ್ಟ್ ಅಲ್ಲವೇ ? ಸಮಯ ಓಡುತ್ತಲೇ ಇರುತ್ತದೆ ನೋಡಿ.
ನಿಮ್ಮ ಕುಟುಂಬದಲ್ಲಿಯೆ ಕೆಲವರು ತಾವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚಿನ ಸಹಾಯ ಮಾಡಿದ್ದೇನೆ ಎನ್ನುವ ಮಾತಾಡಿ ಕನಿಕರ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ನಿಮ್ಮ ಅಂತ್ಯ ಸಂಸ್ಕಾರಕ್ಕೆ ತಾವು ಪಟ್ಟ ಕಷ್ಟವನ್ನು ಅಲ್ಲಿದ್ದವರಿಗೆ ವಿವರಿಸಲು ತೊಡಗುತ್ತಾರೆ. ನಿಧಾನವಾಗಿ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಗುಂಪು ಚದುರುತ್ತದೆ. ಬೇರೆ ಬೇರೆ ದಿಕ್ಕುಗಳಲ್ಲಿ ವಿಭಿನ್ನ ಕವಲುಗಳಲ್ಲಿ ಅವರು ತಮ್ಮ ತಮ್ಮ ಗೂಡಿಗೆ ಮತ್ತು ಕೆಲಸಕ್ಕೆ ಮರಳುತ್ತಾರೆ.
ಮುಂದಿನ ಕೆಲ ದಿನಗಳಲ್ಲಿ ಮತ್ತು ವಾರಗಳಲ್ಲಿ ನಿಮ್ಮ ಮೊಬೈಲ್ ಫೋನ್ ಕೆಲಬಾರಿ ರಿಂಗ್ ಆದೀತು. ನೀವು ಸತ್ತು ಹೋಗಿದ್ದೀರಿ ಎಂದು ಗೊತ್ತಿಲ್ಲದ ಕೆಲವರು ನಿಮಗೆ ಕರೆ ಮಾಡಿರಬಹುದು. ನಿಧಾನಕ್ಕೆ ಕರೆ ಬರುವುದು ಕೂಡ ನಿಂತು ಹೋಗುತ್ತದೆ. ನೀವು ಉದ್ಯೋಗ ಮಾಡುತ್ತಿದ್ದ ಕಂಪನಿ ನಿಮ್ಮ ಸ್ಥಾನಕ್ಕೆ ಬೇರೊಬ್ಬರನ್ನು ಹುಡುಕಾಡಲು ತೊಡಗುತ್ತದೆ.
ಒಂದೆರಡು ವಾರಗಳಲ್ಲಿ ನಿಮ್ಮ ಮಕ್ಕಳು ಕೆಲಸಕ್ಕೆ ಮರಳುತ್ತಾರೆ.
ಕಾರಣ ಅವರ ರಜ ಮುಗಿಯುತ್ತಾ ಬಂದಿರುತ್ತದೆ. ನೀವು ಸತ್ತುಹೋಗಿ ತಿಂಗಳ ನಂತರ ನಿಮ್ಮ ಪ್ರೀತಿಯ ಹೆಂಡತಿ ಟಿವಿಯಲ್ಲಿ ಬರುತ್ತಿರುವ ಕಾಮಿಡಿ ಶೋ ಅನ್ನು ನೋಡಿ ನಗುತ್ತಿರುತ್ತಾಳೆ !!!
ಒಂದು ಅನೂಹ್ಯ ವೇಗದಲ್ಲಿ ಎಲ್ಲರ ಮನಪಟಲದಿಂದ ನೀವು ಮರೆಯಾಗಿ ಹೋಗಿರುತ್ತೀರಿ. ಇದೀಗ ನಿಮ್ಮ ಗೆಳೆಯರೆಲ್ಲರ ಬದುಕು ಸಹಜ ಸ್ಥಿತಿಗೆ ಮರಳಿದೆ. ಹೊಸ ಎಲೆಕ್ಷನ್ ಗಳು ಡಿಕ್ಲೇರ್ ಆಗುತ್ತೆ, ದಿನಕ್ಕೊಂದು ಭ್ರಷ್ಟಾಚಾರದ ಸ್ಕ್ಯಾಂಡಲ್ಗಳು ಹೊರಬರುತ್ತವೆ. ಯಥಾ ಪ್ರಕಾರ ಟ್ರಾಫಿಕ್ ಗಳು, ಜನಸಂದಣಿ, ವಾರದ ಕೊನೆಯಲ್ಲಿ ಭೂರಿ ಭೋಜನ-ಗಮ್ಮತ್ತು - ಎಲ್ಲವೂ ಹಾಗೆಯೇ ಇರುತ್ತೆ : ನೀವೊಬ್ಬರು ಮಾತ್ರ ಇರುವುದಿಲ್ಲ !
ದಿನಗಳು ತಿಂಗಳುಗಳಾಗಿ ವರ್ಷ ಕಾಲಿಡುತ್ತದೆ. ನಿಮ್ಮ ವರ್ಷಾಂತಿಕವನ್ನು ಗ್ರಾಂಡ್ ಆಗಿ ಆಚರಿಸಲಾಗುತ್ತದೆ. ವರ್ಷಗಳು ಕಳೆದಂತೆ, ನೀವು ಬದುಕಿದ್ದಾಗ ಸುತ್ತಮುತ್ತ ನೀವೆಷ್ಟು ಫೇಮಸ್ ಆಗಿದ್ದರೂ, ಇಷ್ಟರಲ್ಲಾಗಲೆ ನಿಮ್ಮನ್ನು ಬಹುತೇಕ ಎಲ್ಲರೂ ಮರೆತು ಬಿಟ್ಟಿರುತ್ತಾರೆ. ಯು ಆರ್ ಡಿಸ್ಕೌಂಟೆಡ್ ಫ್ರಮ್ ದಿಸ್ ವರ್ಲ್ಡ್ ! ಎಲ್ಲೋ ಅಲ್ಲೊಬ್ಬ ಇನ್ನೊಬ್ಬ ಗೆಳೆಯರು, ನಿಮಗೆ ಆತ್ಮೀಯರಾಗಿದ್ದವರು ನಿಮ್ಮನ್ನು ಒಂದು ಕ್ಷಣ ನೆನಪಿಸಿಕೊಳ್ಳಬಹುದು, ಅಷ್ಟೇ.
ಈಗ ಹೇಳಿ, ಎಲ್ಲರೂ ನಿಮ್ಮನ್ನು ಇಷ್ಟು ಬೇಗ ಮರೆತು ಬಿಡುತ್ತಾರೆ. ನೀವು ಮಾತ್ರ ಎಲ್ಲರಿಗಾಗಿ, ಎಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿರಬಹುದೆಂದು, ಯಾರೋ ಏನೆಂದುಕೊಂಡಾರೋ ಎಂದು ಊಹಿಸಿಕೊಂಡು ಬದುಕಿದ್ದಿರಿ. ನಿಮ್ಮ ಬಗ್ಗೆ ಯಾರೂ ಯೋಚಿಸುವುದಿಲ್ಲ, ಯೋಚಿಸಲಾರರು ಕೂಡಾ ! ಹಾಗಾಗಿ ಇನ್ನಾದರೂ ನಿಮಗಾಗಿ ನೀವು ಬದುಕಿ - Live Just for You !