ಖಣ ಖಣ ರಣರಂಗದ ಸಮರ ಕಲಿ, ಸಶಸ್ತ್ರ ರೈತ ದಂಡನಾಯಕ ಕೆದಂಬಾಡಿ ರಾಮಯ್ಯ ಗೌಡರ ಕ್ರಾಂತಿಕಾರಿ ಕಥನ !!!
ಬರಹ: ಸುದರ್ಶನ್ ಬಿ.ಪ್ರವೀಣ್ , ಪ್ರಧಾನ ಸಂಪಾದಕರು, ಹೊಸಕನ್ನಡ. ಕಾಂ
ಇವತ್ತಿನ ಈ ನಮ್ಮ ಅಂಕಣ ಇತಿಹಾಸದ ಬಗ್ಗೆ ನಾವು ನೀವೆಲ್ಲ ಓದಿಕೊಂಡು ಬಂದ ಪುಟಗಳನ್ನು ಮತ್ತಷ್ಟು ಬದಲಿಸಿ, ವಿಸ್ತರಿಸಿ ಬರೆಯುವ ಕೆಲಸ. ಸಾಮಾನ್ಯವಾಗಿ, ನಾವು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವಾಗ ಅ ಹೋರಾಟದ ಕುರುಹು ದೊಡ್ಡದಾಗಿ ನಮಗೆ ಕಾಣಿಸಿಕೊಳ್ಳುವುದು 1857 ರಿಂದ ಆಚೆಗೆ. ಅಲ್ಲಿಂದ ಅದು 90 ವರ್ಷಗಳ ಕಾಲ ನಡೆದ ಸುದೀರ್ಘ ಸಂಘರ್ಷ. ಅದು ಭಾರತದ ಸ್ವಾತಂತ್ರ್ಯ ಸಂಗ್ರಾಮ ನಡೆದ 1857 ರಿಂದ 1947 ರವರೆಗಿನ ಸ್ವಾಭಿಮಾನದ ಹೋರಾಟದ ಒಟ್ಟಾರೆ ಅವಧಿ.
ಇಲ್ಲಿಯವರೆಗೆ ನಾವು, 1857 ರಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆ ಮತ್ತು ಸಿಪಾಯಿ ದಂಗೆಯ ಮೂಲಕ ಪ್ರಾರಂಭ ಆಗುವ ಸ್ವತಂತ್ರ ಭಾರತ ಕನಸಿನ ಬಗ್ಗೆ ಕೇಳಿದ್ದೇವೆ. ಅದಕ್ಕಿಂತಲೂ ಮುಂಚೆ, 1815 ರ ಸುಮಾರಿಗೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಮರ ವೀರ ಸಂಗೊಳ್ಳಿ ರಾಯಣ್ಣನ ಕತ್ತಿಯ ಏಟಿನ ಖಣ ಖಣ ಸದ್ದನ್ನು ಆಲಿಸಿದ್ದೇವೆ.
ಸರಿಸುಮಾರು ಅದೇ ಕಾಲಘಟ್ಟದಲ್ಲಿ, ಅಂದರೆ ಸಿಪಾಯಿ ದಂಗೆಗಿಂತ 20 ವರ್ಷಗಳ ಹಿಂದೆಯೇ, ಸ್ವಾತಂತ್ರ್ಯದ ಪ್ರಜ್ಞೆ ಸಾಮಾನ್ಯರಲ್ಲಿ ಮೂಡಿ ಸ್ವಾತಂತ್ರ್ಯ ಸಂಗ್ರಾಮವನ್ನು ರೈತರೇ ಸೇರಿ ಮೊತ್ತ ಮೊದಲಿಗೆ ಭಾರತದಲ್ಲಿ ಪ್ರಾರಂಭಿಸಿದ್ದು ಕನ್ನಡಿಗರು ಎನ್ನುವ ಹೆಮ್ಮೆಯ ಸಂಗತಿ ಇದೀಗ ಬಯಲಾಗಿದೆ. ಅಂದು ನಮ್ಮ ಕರಾವಳಿಯ ರೈತರೊಬ್ಬರು ಖಡ್ಗ ಕಟಾರಿ ಹಿಡಿದು ಬ್ರಿಟಿಷರನ್ನು ದಿಕ್ಕಾಪಾಲಾಗಿ ಓಡಿಸಿದ್ದರು ಎನ್ನುವ ಸತ್ಯ ಇದೀಗ ನಿಧಾನವಾಗಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿದೆ.
ಇವತ್ತು ನಾವು ನಿಮಗೆ ಹೇಳುತ್ತಿರುವುದು ಸ್ವಾತಂತ್ರ್ಯ ಹೋರಾಟದ ಕಥೆ, ಇದು ಆತ್ಮಗೌರವದ ಕಥೆ, ಮತ್ತು ತನ್ನ ದೊರೆಗಾಗಿ ಕೆರಳಿ ನಿಂತು ಕತ್ತಿ ಹಿಡಿದು ಹೋರಾಟಕ್ಕೆ ಇಳಿದ ರೈತನೊಬ್ಬನ ಕ್ರಾಂತಿಕಾರಿ ಕಥನ. ಇದರ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ ಒಂದಿಷ್ಟು ಸ್ಪೂರ್ತಿ ಹೊಂದುವುದು ಈ ಲೇಖನದ ಉದ್ದೇಶ. ಭಾರತದ ಪ್ರಥಮ ರೈತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನಾವು ನೀವೆಲ್ಲ ಕೇಳಿದ ಮಾಹಿತಿಗೆ ವಿಭಿನ್ನವಾಗಿ ನಾವಿವತ್ತು ಕುತೂಹಲಕಾರಿ ಐತಿಹಾಸಿಕ ಸತ್ಯವೊಂದನ್ನು ನಿಮ್ಮ ಮುಂದೆ ಇಡಲಿದ್ದೇವೆ. ಇದೇ ಅಮರ ಸುಳ್ಯ ಸಮರದ ರೋಮಾಂಚಕಾರಿ ಕಥನ.
ಅಮರ ಸುಳ್ಯ ಸಮರದ ರೋಮಾಂಚಕಾರಿ ಕಥನ
ಅವತ್ತಿನ ತುಳುನಾಡಿನ ಬಹುಭಾಗ ಮತ್ತು ಈಗಿನ ಕೊಡಗನ್ನು ಅಂದಿನ ಹಾಲೇರಿ ರಾಜವಂಶದ ಅರಸರು ವೈಭವೋಪೇತವಾಗಿ ಆಳುತ್ತಾ ಇದ್ದ ಸಂದರ್ಭ. ಆಗಿನ ರಾಜನಾದ ಲಿಂಗರಾಜ ಒಡೆಯರಾದ ಸುಳ್ಯದ ಮಿತ್ತೂರು ನಾಯರ್ ಉಳ್ಳಾಕುಲು ಆಳುತ್ತಿದ್ದ ಕಾಲ ಅದು. ಆಗ ಮಿತ್ತೂರು ನಾಯರ್ ದೈವಗಳ ಮೊಕ್ತಸರನಾಗಿ ಕೆದಂಬಾಡಿ ರಾಮಯ್ಯಗೌಡರು ಶ್ರದ್ದೆಯಿಂದ ಪೂಜಾ ಕೈಂಕರ್ಯ ನಡೆಸುತ್ತಿದ್ದ ಸಮಯ.
ಹಾಲೇರಿ ರಾಜನ ಆಸ್ಥಾನದಲ್ಲಿ ಕೆದಂಬಾಡಿ ರಾಮಯ್ಯಗೌಡರಿಗೆ ಉನ್ನತ ಸ್ಥಾನಮಾನಗಳಿದ್ದವು. ಊರಿನ ಗಣ್ಯವ್ಯಕ್ತಿ ಹಾಗೂ ದೊಡ್ಡ ಶ್ರೀಮಂತ ಜಮೀನ್ದಾರ ರಾಮಯ್ಯ ಗೌಡರ ಮನೆಗೂ ರಾಜನಾದ ಲಿಂಗರಾಜ ಒಡೆಯರು ಖುದ್ದು ಬಂದಿದ್ದರು. ಅಷ್ಟರ ಮಟ್ಟಿಗೆ ಅವರಿಬ್ಬರು ಅವಿನಾಭಾವ ಸಂಬಂಧ ಹೊಂದಿದ್ದರು. ಹಾಲೇರಿ ರಾಜನಾದ ಲಿಂಗರಾಜ ಒಡೆಯರ ಸಾವಿನ ನಂತರ ಅವರ ಮಗ ಚಿಕ್ಕವೀರರಾಜೇಂದ್ರ ಒಡೆಯರು ಅಧಿಕಾರಕ್ಕೆ ಬಂದು ಆಡಳಿತ ನಡೆಸುತ್ತಿರುತ್ತಾರೆ. ಚಿಕ್ಕವೀರರಾಜ ಒಡೆಯರಿಗೂ ಹಾಗೂ ರಾಮಯ್ಯಗೌಡರಿಗೂ ಕೂಡ ಉತ್ತಮ ಒಡನಾಟವಿತ್ತು. ಕ್ರಿ.ಶ. 1834 ರಲ್ಲಿ ಚಿಕ್ಕ ವೀರರಾಜೇಂದ್ರ ಒಡೆಯರನ್ನು ಬ್ರಿಟಿಷರು ಅಧಿಕಾರದಿಂದ ಪದಚ್ಯುತಿಗೊಳಿಸಿ ಬಂಧಿಸುತ್ತಾರೆ. ಇಡೀ ಕೊಡಗಿನ ಹಾಗೂ ತುಳುನಾಡನ್ನು ತಮ್ಮ ಸ್ವಾಧೀನಕ್ಕೆ ಪಡೆದು ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಹೇರಿ ಜನಸಾಮಾನ್ಯರ ಮೇಲೆ ಅತೀವ ತೆರಿಗೆ ವಿಧಿಸಿ ಜನ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿದ್ದರು ಬ್ರಿಟಿಷರು.
ಜನಸಾಮಾನ್ಯರ ಮತ್ತು ರೈತರ ಮೇಲೆ ಬ್ರಿಟಿಷರ ಕ್ರೌರ್ಯ ಹಾಗೂ ದಬ್ಬಾಳಿಕೆಯನ್ನು ಕೆದಂಬಾಡಿ ರಾಮಯ್ಯಗೌಡರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಅಲ್ಲದೆ ತಮ್ಮ ಆಪ್ತರೂ, ಊರಿನ ದೊರೆಯೂ ಆದ ಚಿಕ್ಕ ವೀರರಾಜೇಂದ್ರರನ್ನು ಬ್ರಿಟಿಷರು ಬಂಧಿಸಿದ್ದನ್ನು ಕೇಳಿ ರಾಮಯ್ಯ ಗೌಡರು ಕ್ರುದ್ಧರಾಗುತ್ತಾರೆ. ಜನರಿಗೆ ಮತ್ತು ರಾಜರಿಗೆ ಕಷ್ಟ ಬಂದಾಗ ಗೌಡರು ರಣಕಹಳೆ ಮೊಳಗಿಸುತ್ತಾರೆ. ಆಗ ಶುರುವಾಗಿತ್ತು ಭಾರತದ ಮೊದಲ ರೈತ ಸ್ವಾತಂತ್ರ್ಯಸಂಗ್ರಾಮ !
ಬ್ರಿಟಿಷರ ಎದುರು ಎದ್ದು ನಿಂತ ಕೆದಂಬಾಡಿ ರಾಮಯ್ಯಗೌಡ
“ಅರಮನೆಯ ಒಂದು ನಾಯಿಯನ್ನು ಬೇಕಾದರೂ ರಾಜನೆಂದು ಸ್ವೀಕರಿಸುತ್ತೇವೆ. ಆದರೆ ಪರದೇಶದ ಬ್ರಿಟಿಷರನ್ನು ನಾವು ಎಂದಿಗೂ ಒಪ್ಪಲು ಸಾದ್ಯವಿಲ್ಲ. ಇದರಲ್ಲಿ ನಮ್ಮ ಪ್ರಾಣ ಹೋದರೂ ಸರಿ " ಘೋಷಿಸಿ ಬಿಡುತ್ತಾರೆ ರಾಮಯ್ಯ ಗೌಡರು. ಹಾಗೆ ನಾವು ಹೋರಾಡಲೇಬೇಕೆಂದು ಬ್ರಿಟಿಷರ ವಿರುದ್ಧ ರಣರಂಗಕ್ಕೆ ಇಳಿಯಲು ಯೋಜನೆ ರೂಪಿಸಿ ತಮ್ಮ ಆಪ್ತವಲಯದ ಮತ್ತು ಎಲ್ಲಾ ಜಾತಿ, ಸಮುದಾಯದ ಮುಖಂಡರ ಜೊತೆ ಸಮಾಲೋಚಿಸುತ್ತಾರೆ. ಘರ್ಷಣೆಗೆ ಜನರನ್ನು ಸಂಘಟಿಸುತ್ತಾರೆ ವೀರ ನಾಯಕ ಕೆದಂಬಾಡಿ ರಾಮಯ್ಯ ಗೌಡ.
ಕ್ರಿ.ಶ. 1834ರಿಂದ 1837ರ ವರೆಗೆ ಎಲ್ಲ ತುಳುನಾಡು ಮತ್ತು ಕೊಡಗಿನ ಸಾಮಾನ್ಯ ರೈತಾಪಿ ಜನರೊಂದಿಗೆ ಸೇರಿ ಬ್ರಿಟಿಷರ ವಿರುದ್ಧ ಜನ ಸಂಘಟನೆ ಮಾಡುತ್ತಾರೆ. ಹಾಗೂ ಸಾವಿರಾರು ಯುವಕರಿಗೆ ಯುದ್ಧ ತರಬೇತಿ ಕೊಡಿಸಿ ಕೆದಂಬಾಡಿ ರಾಮಯ್ಯ ಗೌಡರು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡುವಂತೆ ಪ್ರೇರೇಪಿಸುತ್ತಾರೆ.ರಾಜವಂಶಸ್ಥನ ವಂಶದವನೆಂದು ಕೊಡ್ಲಿಪೇಟೆಯ ಹಿಮ್ಮನೆಯ ಒಬ್ಬ ಸಾಮಾನ್ಯ ವ್ಯಕ್ತಿಯಾದ ಪುಟ್ಟಬಸಪ್ಪನನ್ನು ತನ್ನ ಮನೆಯ ಹಿಂಬದಿಯ ಪೂಮಲೆ ಗುಡ್ಡದಲ್ಲಿ ಆಶ್ರಮ ಕಟ್ಟಿಸಿ ಸನ್ಯಾಸಿ ವೇಷ ಧರಿಸಿ ಕೂರಿಸುತ್ತಾರೆ. ಇವರು ಕಲ್ಯಾಣಸ್ವಾಮಿ, ಇವರು ಹಾಲೇರಿ ರಾಜ ವಂಶಸ್ಥ ಎಂದು ಬಿಂಬಿಸಿದಲ್ಲದೇ ಆಧ್ಯಾತ್ಮದ ಬಣ್ಣ ಹಚ್ಚಿ ಬ್ರಿಟಿಷರ ವಿರುದ್ಧ ಜನ ಸಂಘಟಿಸುತ್ತಾರೆ ಗೌಡರು.
ಅದೊಂದು ದಿನ ಬ್ರಿಟಿಷರ ವಿರುದ್ಧ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತ್ತು. ರಾಮಯ್ಯಗೌಡರು ತನ್ನ ಮಗನಿಗೆ ಮದುವೆ ಇದೆ ಎಂದು ಡಂಗೂರ ಹೊರಡಿಸುತ್ತಾರೆ. ಮದುವೆಗೆಂದು ವಿಶಾಲವಾದ ಗದ್ದೆಗೆ ಚಪ್ಪರ ಹಾಕಿಸಿ ಅಲ್ಲಿಗೆ ರೈತ ಹುಡುಗರನ್ನು ಕರೆಸಿಕೊಳ್ಳುತ್ತಾರೆ. ಅಲ್ಲಿ ಆ ಕಾಲಕ್ಕೇ 2000 ಕ್ಕಿಂತ ಹೆಚ್ಚಿನ ರೈತ ಮಹಾ ಸೈನಿಕರು ಮದುವೆಯ ನೆಪದಲ್ಲಿ ಸೇರುತ್ತಾರೆ. ಅಲ್ಲಿ ನಿರ್ಧಾರವಾಗಿತ್ತು ದಂಡಯಾತ್ರೆಯ ಪ್ಲಾನ್ !
ದಂಡಯಾತ್ರೆಯ ಪ್ಲಾನ್ !
ಅಂದು ಗದ್ದೆಯಲ್ಲಿ ಹಾಸಿದ್ದ ವಿಸ್ತಾರವಾದ ಮದುವೆ ಮಂಟಪದಲ್ಲಿ ಹಾಗೆ ರೈತರನ್ನು ಸೇರಿಸಿ ಬ್ರಿಟಿಷರನ್ನು ಭಾರತ ದೇಶದಿಂದ ಹೊಡೆದೋಡಿಸಲು ಆದೇಶಿಸಿಸುತ್ತಾರೆ. ನೆಲ ಅಗೆದು ಒಕ್ಕಲು ಮಾಡುವುದು ಮಾತ್ರ ಗೊತ್ತಿದ್ದ ಅಂದಿನ ಸಾಮಾನ್ಯ ರೈತರು ಕೈಗೆ ಸಿಕ್ಕ ಕತ್ತಿ ಹಿಡಿದುಕೊಂಡು ಹೊರಡುತ್ತಾರೆ. ಅದೇ ಭಾರತ ಸ್ವಾತಂತ್ರ್ಯ ಹೋರಾಟದ ಮೊದಲ ರೈತ ಸೈನ್ಯ !
ಸೈನ್ಯ ಅಂದ ಮೇಲೆ ಆಯುಧಗಳು ಬೇಕೇ ಬೇಕಲ್ಲ. ಅದಕ್ಕಾಗಿ ಕೊಡ್ಲಿಪೇಟೆಯಿಂದ 2000 ಖಡ್ಗ ಮತ್ತು ಬಂದೂಕು ಮುಂತಾದ ಶಸ್ತ್ರಾಸ್ತ್ರಗಳನ್ನು ತಂದು ಜೋಡಿಸುತ್ತಾರೆ. ಕಾಡಿನ ಮಧ್ಯಭಾಗದಲ್ಲಿ ಕಮ್ಮಾರರುಗಳು ರಾತ್ರಿ ಹಗಲು ಒಂದು ಮಾಡಿ ಕಬ್ಬಿಣ ಬೇಯಿಸಲು ಶುರುಮಾಡುತ್ತಾರೆ. ಮತ್ತೆ 200 ಖಡ್ಗಗಳು ಜೋಡಿಯಾಗುತ್ತವೆ. ಜಮೀನುದಾರ ರೈತ ಕೆದಂಬಾಡಿ ರಾಮಯ್ಯ ಗೌಡ ನೇತೃತ್ವದ ಆ ಸೈನ್ಯ ಮೊದಲು ನೇರವಾಗಿ ದಾಳಿ ಮಾಡುವುದು ರಾಮಯ್ಯಗೌಡರ ಮನೆಯಿಂದ ಕೇವಲ 17 ಕಿ.ಮೀ ದೂರವಿರುವ ಬ್ರಿಟಿಷರ ಆಡಳಿತ ಪ್ರದೇಶವಾಗಿದ್ದ ಬೆಳ್ಳಾರೆಯ ಖಜಾನೆಗೆ. ಬೆಳ್ಳಾರೆ ಸುಲಭವಾಗಿ ರೈತರ ವಶವಾಗುತ್ತದೆ. ಅಲ್ಲಿ ರೈತರಿಂದ ವಸೂಲ್ ಮಾಡಿದ್ದ ಸಂಪತ್ತನ್ನು ಮರಳಿ ವಶಕ್ಕೆ ಪಡೆದು ರೈತರಿಗೆ ನೀಡಲಾಗುತ್ತದೆ.
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹಾಗೆ ಮೊದಲ ಗೆಲುವು ದೊರಕುತ್ತದೆ. ಅಲ್ಲಿ ದೊರೆತ ಗೆಲುವು ಚಿಕ್ಕದಾಗಿದ್ದರೂ, ಅದು ಆ ರೈತಾಪಿ ಸೈನ್ಯದಲ್ಲಿ ಹುಮ್ಮಸ್ಸನ್ನು ಅಧಿಕಗೊಳಿಸುತ್ತದೆ. ಅಲ್ಲಿ ಸಂಪೂರ್ಣವಾಗಿ ಗೆದ್ದು, ರೈತರ ಮೇಲೆ ಹೇರಿದ್ದ ಎಲ್ಲಾ ತೆರಿಗೆಯನ್ನು ಆ ದಿನ ಕಲ್ಯಾಣ ಸ್ವಾಮಿಯ ಮುಖಾಂತರ ರದ್ದುಗೊಳಿಸುತ್ತಾರೆ.
ಅವತ್ತು ರಾಮಯ್ಯ ಗೌಡರ ಸಹಿತ ಹಲವು ನಾಯಕರ ಕುದುರೆ ಪುತ್ತೂರಿನ ಕಡೆ ನಾಗಾಲೋಟ ಹಾಕಿತ್ತು. ಬೆಳ್ಳಾರೆಯಿಂದ 25 ಕಿಮೀ ದೂರದ ಬ್ರಿಟಿಷರ ಇನ್ನೊಂದು ಆಡಳಿತ ಕೇಂದ್ರವಾದ ಪುತ್ತೂರನ್ನು ಸ್ವಾಧೀನ ಪಡೆದುಕೊಳ್ಳುತ್ತಾರೆ. ಪುತ್ತೂರಿನಲ್ಲಿದ್ದ ಬ್ರಿಟಿಷ್ ಜಿಲ್ಲಾಧಿಕಾರಿ ಲೆವಿನ್ ಹೆದರಿ ಮಂಗಳೂರಿಗೆ ಪಲಾಯನ ಮಾಡುತ್ತಾನೆ.
ತದನಂತರ ಪುತ್ತೂರಿನಿಂದ ಮುಂದಕ್ಕೆ ಹೊರಟ ಸೈನ್ಯಕ್ಕೆ ಪ್ರತಿ ಊರಿನಲ್ಲೂ ನೂರಾರು ಜನರು ರೈತ ಸೈನಿಕರು ಶಸ್ತ್ರ ಸಜ್ಜಿತರಾಗಿ ಸೇರಿಕೊಳ್ಳುತ್ತಾರೆ. 27 ಕಿ.ಮೀ ದೂರದ ಬಂಟ್ವಾಳವನ್ನು ತಲುಪಿದಾಗ ಸೈನಿಕರ ಸಂಖ್ಯೆ 3500 ದಷ್ಟಾಗುತ್ತದೆ. ಬಂಟ್ವಾಳ ರೈತ ಸೈನಿಕರ ವಶವಾಗುತ್ತದೆ. ಹಾಗೆಯೇ ಬಂಟ್ವಾಳದಿಂದ ಹೊರಟ 6000 ರೈತ ಸೈನ್ಯ ಬಂಟ್ವಾಳದಿಂದ 25 ಕಿ.ಮೀ ದೂರದ ಮಂಗಳೂರನ್ನು ತಲುಪುತ್ತಾರೆ. ಅವತ್ತು ಕ್ರಿ.ಶ. 1837ನೇ ಏಪ್ರಿಲ್ 5 ನೆಯ ತಾರೀಕು.
ಕೆದಂಬಾಡಿ ರಾಮಯ್ಯಗೌಡರು ಮನೆಯಿಂದ ಹೊರಟ ರೈತಸೈನ್ಯ ಸುಮಾರು 90 ಕಿ.ಮೀ ದೂರದ ಮಂಗಳೂರನ್ನು ತಲುಪುವಾಗ 10,000 ಕ್ಕಿಂತ ಅಧಿಕ ರೈತ ಸೈನಿಕರ ಬೃಹತ್ ದಂಡಾಗಿ ಮಾರ್ಪಾಡಾಗುತ್ತದೆ. 2000 ಕ್ಕೂ ಅಧಿಕ ಖಡ್ಗಗಳು ಜಳಪಿಸುತ್ತಾ ಬ್ರಿಟಿಷರನ್ನು ಚೆಂಡಾಡುತ್ತವೆ.
ಅವತ್ತು ಮಂಗಳೂರಿನ ಗುಡ್ಡಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ ರಕ್ತಸಿಕ್ತ ಹೋರಾಟ ನಡೆದೇ ಹೋಗುತ್ತದೆ. ಎರಡೂ ಕಡೆ ಅಪಾರ ಸಾವು ನೋವು ಸಂಭವಿಸುತ್ತದೆ. ಅಲ್ಲಿ ಬ್ರಿಟಿಷ್ ಸೈನ್ಯವನ್ನು ಸಂಪೂರ್ಣ ಸದೆ ಬಡಿದು ಬ್ರಿಟಿಷರ ಆಡಳಿತದ ಕೇಂದ್ರವಾಗಿದ್ದ ಗುಡ್ಡೆಯಲ್ಲಿ ಹಾರಾಡುತ್ತಿದ್ದ ಬ್ರಿಟಿಷರ ಬಾವುಟವನ್ನು ಕಿತ್ತೆಸೆದು ಈ ನೆಲದ ಕ್ರಾಂತಿ ಬಾವುಟ ಮೇಲಕ್ಕೆ ಏರಿಸಲಾಗುತ್ತದೆ. ಭಾರತೀಯರ ಸ್ವಾಭಿಮಾನದ ಧ್ವಜ ಎತ್ತರದ ಗುಡ್ಡೆಯ ಮೇಲೆ ಹಾರಾಡುತ್ತದೆ. ಅಲ್ಲಿಂದ ಈ ಪ್ರದೇಶಕ್ಕೆ ಇಂದಿನ ಬಾವುಟಗುಡ್ಡೆ ಎಂಬ ಹೆಸರು ಬರುತ್ತದೆ.
ಅಲ್ಲಿಂದ 13 ದಿವಸಗಳ ಕಾಲ ಈ ನಾಡಿಗೆ ಸ್ವಾತಂತ್ರ್ಯವನ್ನು ಒದಗಿಸಿಕೊಟ್ಟು, 13 ದಿವಸಗಳ ಕಾಲ ಹೊಸ ಸರಕಾರವನ್ನು ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದಲ್ಲಿ ಕಟ್ಟಿ ಮುನ್ನೆಡೆಸಲಾಗುತ್ತದೆ. ಇದು ಭಾರತದ ನೆಲದಲ್ಲಿ ಬ್ರಿಟಿಷರಿಗೆ ರೈತರಿಂದಲೇ ಆದ ಪ್ರಥಮ ಸೋಲು, ಭಾರತದ ಸಾಮಾನ್ಯ ಜನರಿಗೆ ಬ್ರಿಟಿಷರ ವಿರುದ್ಧ ದೊರಕಿದ ಪ್ರಪ್ರಥಮ ಜಯ.
ತಮಗೆ ಉಂಟಾದ ಸೋಲಿನಿಂದ ಕೆರಳಿ ನಿಂತ ಬ್ರಿಟಿಷರು ತದನಂತರ ಮುಂಬಯಿ, ಕಲ್ಲಿಕೋಟೆ ಮುಂತಾದ ಪ್ರದೇಶಗಳಿಂದ ಸುಸಜ್ಜಿತ ಪಡೆಗಳನ್ನು ಮಂಗಳೂರಿಗೆ ಕರೆಸಿಕೊಳ್ಳುತ್ತಾರೆ. ಆ ಮದ್ದು ಗುಂಡು ಸಮೇತ ಬಂದ ಸುಸಜ್ಜಿತ ಸೈನ್ಯದ ಎದುರು ರಾಮಯ್ಯ ಗೌಡರ ಕತ್ತಿ ಕಟಾರಿಗಳ ಆಟ ನಡೆಯುವುದಿಲ್ಲ. ರಾಮಯ್ಯ ಗೌಡರ ತಂಡ ಅನಿವಾರ್ಯವಾಗಿ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ಹೋರಾಟದಲ್ಲಿ ರಾಮಯ್ಯ ಗೌಡ ಮತ್ತು ಅವರ ಮಗ ಸಣ್ಣಯ್ಯನಾದಿಯಾಗಿ ಹಲವು ಹೋರಾಟಗಾರರು ಹುತಾತ್ಮರಾಗುತ್ತಾರೆ.
ಈ ಭಾರತದ ಮೊದಲ ರೈತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಪ್ರಮುಖ ಹೋರಾಟಗಾರರಿಗೆ ಗಲ್ಲುಶಿಕ್ಷೆ, ಜೀವಾವಧಿಯಂತಹಾ ಘೋರ ಶಿಕ್ಷೆ ವಿಧಿಸಲಾಗುತ್ತದೆ.
ಅಂದು ಹಾಗೆ ಕೆದಂಬಾಡಿ ರಾಮಯ್ಯಗೌಡ ಮತ್ತು ಮಗನ ಸಹಿತ ಇತರ ನಾಯಕರನ್ನು ಕೊಂದು ಹಾಕಿದ ನಂತರ ಅವರೆಲ್ಲರ ದೇಹಗಳನ್ನು ಅಲ್ಲೊಂದು ಕಡೆ ನೇತು ಹಾಕಿ ಬಿಡಲಾಯಿತು. ವಾರಗಳ ಕಾಲ ಆ ಶವಗಳು ಅಲ್ಲೇ ಕೊಳೆತು ರಣ ಹದ್ದುಗಳಿಗೆ ಆಹಾರವಾಗಿ ಹೋದವು. ಅಂತಹ ಭೀಕರ ವಾತಾವರಣವನ್ನು ಸೃಷ್ಟಿಮಾಡಿದ್ದರು ಬ್ರಿಟಿಷರು. ಆ ರಣ ಭೀಕರ ಕಟ್ಟೆಯೇ ಮುಂದಕ್ಕೆ ಬಿಕರ್ಣ ಕಟ್ಟೆ ಎಂಬ ಹೆಸರು ಪಡೆದುಕೊಂಡು ಇಂದಿಗೂ ಮಂಗಳೂರಿನಲ್ಲಿ ಅದೇ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದೆ.
ಇನ್ನು ನೂರಾರು ಜನರಿಗೆ ಗಡಿಪಾರು ಶಿಕ್ಷೆ, ಜೈಲು ಶಿಕ್ಷೆಯಂತ ಘೋರಶಿಕ್ಷೆ ವಿಧಿಸಲಾಗುತ್ತದೆ. ಈ ಹೋರಾಟ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು, ಅಮರ ಸುಳ್ಯ ಸ್ವಾತಂತ್ರ್ಯ ಸಮರ ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದೆ. ಇದು ಅಖಂಡ ಭಾರತದ ದೇಶವಾಸಿಗಳ ಸ್ವಾತಂತ್ರ್ಯದ ಪ್ರಜ್ಞೆಯನ್ನು ಬಡಿದೆಬ್ಬಿಸಿ ಮುಂದಿನ ಹಲವು ಹೋರಾಟಗಳಿಗೆ ಸ್ಪೂರ್ತಿಯಾಗಿ ನಿಲ್ಲುತ್ತದೆ.
ಇವತ್ತು ಕರಾವಳಿ ಕರ್ನಾಟಕದ ಗೆಳೆಯರೆಲ್ಲ ಸೇರಿಕೊಂಡು ಆ ಧೀಮಂತ ರೈತ ನಾಯಕ, ಭಾರತದ ರೈತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಶಶಸ್ತ್ರ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರನ್ನು ನೆನೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಬೃಹತ್ ಪುತ್ತಳಿಯ ಅನಾವರಣ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಸರಕಾರದ ನೆರವಿನೊಂದಿಗೆ ಬರುವ, ನವಂಬರ್ 19, 2022 ರ ಶನಿವಾರ ನಡೆಯಲಿದೆ. ಇವತ್ತು ಸ್ವಾತಂತ್ರ್ಯದ ಸವಿಯನ್ನು ಉಣ್ಣುತ್ತಿರುವ ನಾವೆಲ್ಲರೂ ಅವತ್ತು ಬಾವುಟ ಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ದ್ವಜ ನೆಟ್ಟು ಘರ್ಜಿಸಿ ಹುತಾತ್ಮರಾದ ಕೆದಂಬಾಡಿ ರಾಮಯ್ಯಗೌಡ ಮತ್ತು ಉಳಿದೆಲ್ಲಾ ಹುತಾತ್ಮರನ್ನು ಸ್ಮರಿಸಿಕೊಳ್ಳೋಣ. ನಾಳೆ ನವೆಂಬರ್ 19 ರ ಕಾರ್ಯಕ್ರಮವನ್ನು ಖುದ್ದು ಭಾಗವಹಿಸಿ ಯಶಸ್ಸುಗೊಳಿಸೋಣ.
ಬರಹ: ಸುದರ್ಶನ್ ಬಿ.ಪ್ರವೀಣ್, ಪ್ರಧಾನ ಸಂಪಾದಕರು, ಹೊಸಕನ್ನಡ. ಕಾಂ