Surgery video: ಸ್ತನ ಕಸಿ ಸರ್ಜರಿ ವೀಡಿಯೋ ವೈರಲ್: ಕೋರ್ಟ್ ಮೆಟ್ಟಿಲೇರಿದ ಮಹಿಳೆ
Surgery video: ರೋಗಿಗಳ ಗೌಪ್ಯತೆ ಕಾಪಾಡುವುದು, ಅವರ ವೈಯಕ್ತಿಕ ವಿಚಾರವನ್ನು ವೈದ್ಯಕೀಯ ಕಾರಣದ ಅಥವಾ ವೈದ್ಯರ ಹೊರತಾಗಿ ಬೇರೆಯವರಿಗೆ ಹೇಳುವುದು ತೋರಿಸುವುದು ಶಿಕ್ಷಾರ್ಹ ಅಪರಾಧ. ಇದು ವೈದ್ಯಕೀಯ ಕ್ಷೆತ್ರದಲ್ಲಿ ಕಾರ್ಯನಿರ್ವಹಿಸುವ ದಾದಿಯಿಂದ ಹಿಡಿದು, ವೈದ್ಯರು, ಹೀಗೆ ಎಲ್ಲರಿಗೂ ಇದು ಅನ್ವಯ ಆಗುತ್ತೆ. ಆದ್ರೆ ಚೀನಾದಲ್ಲಿ ಆಸ್ಪತ್ರೆ ಸಿಬ್ಬಂದಿಯೇ ಶಸ್ತ್ರಚಿಕಿತ್ಸೆಯ ವೀಡಿಯೋವೊಂದನ್ನು (surgery video) ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತಮ್ಮ ವೃತ್ತಿ ನಿಯಮವನ್ನು ಮರೆತಿರುವುದರ ಜೊತೆಗೆ ಮಹಿಳೆಯ ಮಾನಕ್ಕೂ ಭಂಗ ತಂದಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಮಹಿಳೆ ಈಗ ತಾನು ಶಸ್ತ್ರಚಿಕಿತ್ಸೆಗೊಳಗಾದ ಆಸ್ಪತ್ರೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.
ಹೌದು, ಚೀನಾದಲ್ಲಿ ಗಾವೋ ಎಂಬ ಮಹಿಳೆಯೊಬ್ಬರು ಜನವರಿ ಯಲ್ಲಿ ಸೆಂಟ್ರಲ್ ಚೀನಾದ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಯಲ್ಲಿ ತಮ್ಮ ಸ್ತನಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆದರೆ ಈ ಶಸ್ತ್ರಚಿಕಿತ್ಸೆ ನಡೆದು ಐದು ತಿಂಗಳ ನಂತರ ಈಕೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ವೀಡಿಯೋ ಚೀನಾದ ಸಾಮಾಜಿಕ ಜಾಲತಾಣವಾದ ಡೂಯಿನ್( Douyin)ನಲ್ಲಿ ವೈರಲ್ ಆಗಿದೆ.
ಈ ವೈರಲ್ ಆದ ವೀಡಿಯೋದಲ್ಲಿ ಸರ್ಜರಿ ಮೊದಲಿನ ಹಾಗೂ ಸರ್ಜರಿ ನಂತರದ ದೃಶ್ಯಗಳಿವೆ. ಗಾವೋ ಅನಸ್ಥೇಸಿಯಾದ ಅಮಲಿನಲ್ಲಿದ್ದು, ಪೂರ್ಣವಾಗಿ ಬ್ಯಾಂಡೇಜ್ ಹಾಕಿಕೊಂಡಿರುವುದು ವೀಡಿಯೋದಲ್ಲಿ ಕಾಣಿಸುತ್ತೆ ಮತ್ತು ಇನ್ನು ಹಲವರು ಮಹಿಳೆಯರು ವೀಡಿಯೋದಲ್ಲಿ ಕಾಣಿಸುತ್ತಿದ್ದಾರೆ.
ಹೀಗೆ ತನ್ನ ವೀಡಿಯೋ ವೈರಲ್ ಮಾಡುವ ಮೂಲಕ ಆಸ್ಪತ್ರೆ ತನ್ನ ಖಾಸಗಿತನದ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿರುವ ಮಹಿಳೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಹಲವು ಮನವಿಗಳ ನಂತರವೂ ಆಸ್ಪತ್ರೆ ಆರೋಪಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷಿಸುವುದಕ್ಕೆ ಮುಂದಾಗಿಲ್ಲ, ಜೊತೆಗೆ ಆ ವೀಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಿಂದ ತೆಗೆದಿಲ್ಲ,.
ಇದರಿಂದ ಬೇಸರಗೊಂಡಿರುವ ಮಹಿಳೆ ಗಾವೋ, ಆಸ್ಪತ್ರೆ ವಿರುದ್ಧ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಗಾವೋ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬೆಂಬಲಿಸಿದ್ದು, ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಕೀಲರೊಬ್ಬರು ಪ್ರತಿಕ್ರಿಯಿಸಿದ್ದು, ರೋಗಿಯ ಒಪ್ಪಿಗೆ ಇಲ್ಲದೇ ಅವರ ಮುಖ ತೋರಿಸುವುದು ವೀಡಿಯೋ ಮಾಡುವುದು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಹೊಸ ಉದ್ಯೋಗಿ ಅಥವಾ ಮಾಜಿ ಉದ್ಯೋಗಿ ಎಂಬುದನ್ನು ಲೆಕ್ಕಿಸದೇ ಆರೋಪಿ ಶಿಕ್ಷೆಗೆ ಅರ್ಹನಾಗುತ್ತಾನೆ ಎಂದು ಹೇಳಿದ್ದಾರೆ.