Sullia: ಖ್ಯಾತ ಕಿರುತೆರೆ ನಟಿಯ ತಂದೆ ಆತ್ಮಹತ್ಯೆ - ಕಾರಣ ಕೇಳಿದ್ರೆ ನೀವೂ ಮರುಗುತ್ತೀರಾ?!
Sullia: ಎಷ್ಟೇ ಔಷಧಿ ಸಿಂಪಡಣೆ ಮಾಡಿದರೂ ಅಡಿಕೆ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ, ವಿಪರೀತ ನಷ್ಟ ಉಂಟಾಗುತ್ತಿದೆ ಎಂದು ಖ್ಯಾತ ಕಿರುತೆರೆ ನಟಿ ದಿವ್ಯಶ್ರೀ ನಾಯಕ್ ಸುಳ್ಯ ಅವರ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೌದು, ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಕರಾವಳಿ ಹಾಗೂ ಮಲೆನಾಡಿನ ರೈತರ ಜೀವನಾಡಿ ಅಡಿಕೆ ಬೆಳೆ. ಆದರೆ ಬೆಲೆ ಇಳಿಕೆ, ಅನೇಕ ರೋಗಗಳಿಂದ ಬೆಳೆಗಾರರು ಕಂಗಾಲಾಗಿ ಹೋಗಿದ್ದಾರೆ. ಇತ್ತೀಚೆಗಂತೂ ಅಡಿಕೆಗೆ ಹಳದಿ ರೋಗ ಉಲ್ಬಣಗೊಂಡಿದೆ. ಅದರಲ್ಲೂ ಈ ವರ್ಷ ಮಳೆ ಬಾರದ ಹಿನ್ನೆಲೆಯಲ್ಲಿ ಮತ್ತಷ್ಟು ರೋಗ ಉಲ್ಬಣಗೊಂಡು ಇಳುವರಿ ಸಂಪೂರ್ಣ ಕುಸಿತವಾಗಿದೆ. ಹೀಗಾಗಿ ಅಡಿಕೆ ನಷ್ಟದಿಂದ ಮನನೊಂದು ಕಿರುತೆರೆ ನಟಿ ದಿವ್ಯಶ್ರೀ ನಾಯಕ್ ಸುಳ್ಯ(Sullia) ಅವರ ತಂದೆ ನಾರಾಯಣ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತಮ ಕೃಷಿಕರಾಗಿದ್ದ ನಾರಾಯಣ ನಾಯಕ್ ಅವರ ಅಡಿಕೆ ತೋಟಕ್ಕೆ ಹಳದಿ ರೋಗ ಬಾಧಿಸಿ ಸರ್ವನಾಶವಾಗಿದೆ. ಮತ್ತೊಂದೆಡೆ ಇವರ ರಬ್ಬರ್ ತೋಟದ ಇಳುವರಿ ಕುಂಠಿತವಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಕಾರಣದಿಂದಲೇ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಾರಾಯಣ್ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಇಂದು ಪತ್ನಿ ಮಗಳ ಮನೆಗೆ ಹೋಗಿದ್ದರು. ಇಂದು ಮಧ್ಯಾಹ್ನವಾದರೂ ಮನೆ ಬಾಗಿಲು ತೆರೆಯದ ಕಾರಣ ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಾರಾಯಣ ನಾಯಕ್ ಅವರು ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆ ಮದ್ದಳೆ ವಾದಕರಾಗಿದ್ದರು.