School Fees Hike: 30% ವರೆಗೆ ಶುಲ್ಕ ಏರಿಸಲು ಮುಂದಾದ ಖಾಸಗಿ ಶಾಲೆಗಳು !!
School Fees Hike: ಹೊಸ ಶೈಕ್ಷಣಿಕ ವರ್ಷ ಇನ್ನೇನು ಶುರುವಾಗುತ್ತಿದೆ. ಎಲ್ಲಾ ಶಾಲಾ-ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಆದರೆ ಈ ಮೊದಲೇ ಶಾಸಗಿ ಶಾಲೆಗಳು ಪೋಷಕರಿಗೆ ಶಾಕ್ ನೀಡಿವೆ.
ರಜೆ ಮುಗಿದು ಶಾಲಾ ಮಕ್ಕಳ ಮರುಪ್ರವೇಶಾತಿ ನಡೆಯುತ್ತಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಈ ವರ್ಷದಿಂದ ಶುಲ್ಕ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ(School Fees Hike). ಇದರಂತೆ ಶಾಲೆಗಳು ಶೇ.20ರಿಂದ 30ರವರೆಗೆ ಬೇಕಾಬಿಟ್ಟಿಯಾಗಿ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ ಮುಂದುವರೆಸಿವೆ. ಜೊತೆಗೆ ಒಂದು ಅಥವಾ ಎರಡು ಕಂತಿನಲ್ಲಿ ಶುಲ್ಕ ಪಾವತಿಗೂ ಶಾಲೆಗಳು ಒತ್ತಾಯಿಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಆ ಶಾಲಾ ಮಕ್ಕಳ ಪಾಲಕರು ಚಿಂತಿತರಾಗಿದ್ದಾರೆ.
ಅಂದಹಾಗೆ ಸಿಬಿಎಸ್‌ಇ(CBSE), ಐಸಿಎಸ್‌ಇ(ICSE) ಮತ್ತು ಎಸ್‌ಎಸ್‌ಎಲ್‌ಸಿ(SSLC) ಬೋರ್ಡ್‌ಗೆ ಸಂಯೋಜಿತವಾಗಿರುವ ಖಾಸಗಿ ಶಾಲೆಗಳಲ್ಲಿ ಕಳೆದ ಶೈಕ್ಷಣಿಕ ವರ್ಷದವರೆಗೆ, ಮೂರು ಕಂತುಗಳಲ್ಲಿ ಶುಲ್ಕವನ್ನು ಪಾವತಿಸುವ ಅವಕಾಶ ಇತ್ತು. ಕೆಲವು ವಿಶೇಷ ಸಂದರ್ಭ ಎಂದು ಪರಿಗಣಿಸಿ ಹೆಚ್ಚುವರಿ ಕಂತುಗಳನ್ನೂ ಪಾಲಕರಿಗೆ ಆಡಳಿತ ಮಂಡಳಿಗಳು ಕೊಡುತ್ತಿದ್ದವು. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಹೆಚ್ಚಿನ ಕಂತಿನ ಅವಕಾಶವನ್ನೂ ಶಾಲೆಗಳೂ ನೀಡುತ್ತಿದ್ದವು. ಒಂದೇ ಕಂತಿನಲ್ಲಿ ತಪ್ಪಿದರೆ ಎರಡು ಕಂತಿನಲ್ಲಿ ಶುಲ್ಕ ಕಟ್ಟಲೇಬೇಕು. ಅದಕ್ಕಿಂತ ಹೆಚ್ಚು ಅವಕಾಶ ನೀಡಲಾಗುವುದಿಲ್ಲ ಎನ್ನುತ್ತಿವೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಎಲ್ಲೆಲ್ಲಿ ಶುಲ್ಕ ಹೆಚ್ಚಳ?
ಬೆಂಗಳೂರಿನ ರಾಜಾಜಿನಗರ, ರಾಜರಾಜೇಶ್ವರಿ ನಗರ, ಗೊರಗುಂಟೆಪಾಳ್ಯ, ಬಾಗಲಗುಂಟೆ ಸೇರಿದಂತೆ ವಿವಿಧೆಡೆ ಇರುವ ಹಲವು ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಹಾಗೂ ಪೋಷಕರು ನೀಡಿದ ಮಾಹಿತಿ ಗಮನಿಸಿದಾಗ ಶೇ.20ರಿಂದ 30ರಷ್ಟು ಶುಲ್ಕ ಹೆಚ್ಚಳ ಕಂಡುಬಂದಿದೆ. ಬಜೆಟ್ ಶಾಲೆಗಳು ಎಂದು ಹೇಳಿಕೊಳ್ಳುವ ಆಡಳಿತ ಮಂಡಳಿಗಳು ಕನಿಷ್ಠ 25 ರಿಂದ ಗರಿಷ್ಠ 30 ಸಾವಿರ ರುಪಾಯಿ ಇದ್ದ ಶುಲ್ಕವನ್ನು ಕನಿಷ್ಠ 30 ರಿಂದ ಗರಿಷ್ಠ 35 ಸಾವಿರ ರು.ವರೆಗೂ ಏರಿಕೆ ಮಾಡಿವೆ.
ಖಾಸಗಿ ಶಾಲಾ ಶುಲ್ಕ ಸಂಗ್ರಹ; ಏನಿದು ಸಮಸ್ಯೆ?
ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರವಾಗಿ ಸರ್ಕಾರ ಯಾವುದೇ ರೀತಿ ಹಸ್ತಕ್ಷೇಪ ಮಾಡುವಂತೆ ಇಲ್ಲ. ಅದು ಆಯಾ ಶಾಲೆಗೆ ಸಂಬಂಧಿಸಿದ್ದು ಎಂದು ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ತೀರ್ಪು ನೀಡಿತ್ತು. ಇದು ಖಾಸಗಿ ಶಾಲೆಗಳಿಗೆ ವರದಾನವಾದಂತೆ ಇದೆ. ಹೀಗಾಗಿ ಈ ಬಾರಿ ಶೇಕಡ 30 ರಿಂದ 40ರಷ್ಟು ಶುಲ್ಕ ಏರಿಕೆ ಮಾಡಿದ್ದೂ ಅಲ್ಲದೆ, ಒಂದೆ ಕಂತಿನಲ್ಲಿ ಶುಲ್ಕ ಪಾವತಿಸಲು ಹೇಳುತ್ತಿರುವುದು ಪಾಲಕರ ಸಂಕಟಕ್ಕೆ ಕಾರಣ.