Mangalore: ಸೌದಿಯಲ್ಲಿ ಬಂಧಿಯಾಗಿದ್ದ ಕಡಬದ ಯುವಕ ಇಂದು ಸ್ವದೇಶಕ್ಕೆ!! ಗೆಳೆಯರ ನಿರಂತರ ಶ್ರಮ-ಭರವಸೆಯಲ್ಲೇ ಕೈತೊಳೆದುಕೊಂಡ್ರಾ ಜನಪ್ರತಿನಿಧಿಗಳು
ಮಂಗಳೂರು:ಕಳೆದ ಹನ್ನೊಂದು ತಿಂಗಳಿನಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಮಾಡದ ತಪ್ಪಿಗಾಗಿ ಜೈಲುಪಾಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ನಿವಾಸಿ ದಿ.ಕೆಂಚಪ್ಪ ಗೌಡ ಹಾಗೂ ಹೇಮಾವತಿ ದಂಪತಿ ಪುತ್ರ ಚಂದ್ರಶೇಖರ್ ಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದ್ದು,ಸ್ನೇಹಿತರ ನಿರಂತರ ಪ್ರಯತ್ನದಿಂದ ಇಂದು ಸ್ವದೇಶಕ್ಕೆ ಮರಳಲಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ಚಂದ್ರಶೇಖರ್ ಹುದ್ದೆಯಲ್ಲಿ ಪದೋನ್ನತಿ ಹೊಂದಿ ಸೌದಿ ಅರೇಬಿಯಾದ ರಿಯಾದ್ ಗೆ ತೆರಳಿದ್ದು, ಕಳೆದ ನವೆಂಬರ್ ನಲ್ಲಿ ಹೊಸ ಮೊಬೈಲ್ ಹಾಗೂ ಸಿಮ್ ಖರೀದಿಗೆಂದು ಅಲ್ಲಿನ ಮೊಬೈಲ್ ಮಳಿಗೆಯೊಂದಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಅಲ್ಲಿ ನೀಡಿದ ಒಂದೆರಡು ಅರ್ಜಿ ಫಾರ್ಮ್ ಗಳಿಗೆ ಸಹಿ(ಹೆಬ್ಬೆಟ್ಟು)ಮಾಡಿದ್ದು,ಬಳಿಕ ಅವರ ಮೊಬೈಲ್ ಸಂಖ್ಯೆಗೆ ಕೆಲವೊಂದು ಸಂದೇಶಗಳ ಸಹಿತ ಒಂದೆರಡು ದಿನಗಳಲ್ಲಿ ನಿರಂತರ ಕರೆಗಳು ಬಂದಿತ್ತು. ಕರೆ ಮಾಡಿದಾತ ಸಿಮ್ ಮಾಹಿತಿ ಸಹಿತ ಒಟಿಪಿ ಕೇಳಿದ್ದು,ಒಟಿಪಿ ತಿಳಿಸಿದ ಒಂದು ವಾರಗಳ ಬಳಿಕ ಅಲ್ಲಿನ ಪೊಲೀಸರಿಂದ ಚಂದ್ರಶೇಖರ್ ಬಂಧನಕ್ಕೊಳಗಾಗಿದ್ದರು.
ಇತ್ತ ಬಂಧನವಾದ ಸುದ್ದಿ ತಿಳಿದ ಗೆಳೆಯರು ಮನೆಯವರಿಗೆ ವಿಷಯ ತಿಳಿಸಿದ್ದು, ಅಲ್ಲಿನ ಸ್ನೇಹಿತರಿಗೂ ಪೊಲೀಸರು ಭೇಟಿಗೆ ಅವಕಾಶ ನಿರಾಕರಿಸಿದ ಬಳಿಕ ಕೇವಲ ಎರಡು ನಿಮಿಷಗಳ ಕಾಲ ಕರೆ ಮಾಡಿ ಮಾತನಾಡಲು ಅವಕಾಶ ನೀಡಲಾಗಿತ್ತು.
ಬಂಧನಕ್ಕೆ ಕಾರಣವೇನು!?
ರಿಯಾದ್ ನಲ್ಲಿ ಹೊಸ ಸಿಮ್ ಖರೀದಿಸಿದ ಬಳಿಕ ಬಂದ ಕರೆಯೊಂದಕ್ಕೆ ಉತ್ತರಿಸಿದ ಚಂದ್ರಶೇಖರ್ ಒಟಿಪಿ ತಿಳಿಸಿದ್ದರು. ಈ ಸಂಖ್ಯೆಯನ್ನೇ ಉಪಯೋಗಿಸಿದ ಖದೀಮರು ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಳೀಯ ಬ್ಯಾಂಕ್ ಒಂದರಲ್ಲಿ ಖಾತೆ ತೆರೆದು, ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ಹಣ ಜಮೆ ಮಾಡಲಾಗಿತ್ತು. ಬಳಿಕ ಆ ಹಣ ಬೇರೆ ದೇಶಕ್ಕೆ ವರ್ಗಾವಣೆಯಾಗಿದ್ದು, ಇತ್ತ ಹಣ ಕಳೆದುಕೊಂಡ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಹಣ ಜಮೆಯಾದ ಖಾತೆ ಹೊಂದಿದ ಚಂದ್ರಶೇಖರ್ ಅವರನ್ನು ಬಂಧಿಸಿದ್ದರು.
ಭರವಸೆಯಲ್ಲೇ ದಿನ ದೂಡಿದ್ರಾ ಜನಪ್ರತಿನಿಧಿಗಳು!?
ಚಂದ್ರಶೇಖರ್ ಬಂಧನವಾಗಿರುವ ವಿಚಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಹಿತ ಸಂಸದ ನಳಿನ್ ಕುಮಾರ್ ಕಟೀಲ್ ಗಮನಕ್ಕೆ ತರಲಾಗಿತ್ತು. ಈ ವೇಳೆ ಸಚಿವೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ಜಾರಿಕೊಂಡಿದ್ದು, ಒತ್ತಡ ಹೇರದ ಕಾರಣ ಪತ್ರ ರವಾನೆಯಲ್ಲಿ ವಿಳಂಬವಾಗಿತ್ತು. ಸಂಸದರು ಕೇವಲ ಟ್ವೀಟ್ ಮಾಡಿ ವಾರದೊಳಗಡೆ ಸ್ವದೇಶಕ್ಕೆ ಕರೆತರುವ ಭರವಸೆ ನೀಡಿದ್ದರೂ, ಬಳಿಕ ಆ ಗೋಜಿಗೆ ಹೋಗಿರಲಿಲ್ಲ.
ಸದ್ಯ ವಿವಾಹ ನಿಶ್ಚಿತಾರ್ಥವಾಗಿದ್ದ ಯುವಕ ಚಂದ್ರಶೇಖರ್ ಅವರ ಬರುವಿಕೆಗಾಗಿ ಅವರಿವರ ಕೈಕಾಲು ಹಿಡಿದ ಹೆತ್ತಬ್ಬೆಯ ಮೊಗದಲ್ಲಿ ಆನಂದ ಭಾಷ್ಪ ಸುರಿದಿದ್ದು, ಸುಮಾರು ಹತ್ತನ್ನೆರಡು ಲಕ್ಷ ಹಣ ಹೊಂದಿಸಿ, ನಿರಂತರ ಪ್ರಯತ್ನದಿಂದ ಸ್ವದೇಶಕ್ಕೆ ಕರೆತರುವಲ್ಲಿ ಚಂದ್ರಶೇಖರ್ ಸ್ನೇಹಿತರು ಹಾಗೂ ಮಡಿಕೇರಿಯ ಅರುಣ್ ಕುಮಾರ್, ಮಂಗಳೂರಿನ ಕಬೀರ್ ಎಂಬವರು ಸತತವಾಗಿ ಶ್ರಮಿಸಿದ್ದರು.