Mangaluru ಯುವತಿಯ ಕೊಲೆ ಯತ್ನ ಪ್ರಕರಣ; 12 ಬಾರಿ ಚೂರಿ ಇರಿತ, ಅಪರಾಧಿ ಸುಶಾಂತ್‌ಗೆ 18 ವರ್ಷ 1 ತಿಂಗಳ ಸಜೆ!!
Mangaluru: ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲಿ 2019 ರಲ್ಲಿ ಯುವತಿಯೊಬ್ಬಳಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಕುರಿತಂತೆ ನ್ಯಾಯಾಲಯವು ಶುಕ್ರವಾರ ತೀರ್ಪು ಪ್ರಕಟಿಸಿದೆ. ಮಂಗಳೂರು ನ್ಯಾಯಾಲಯವು ಯುವಕ ಸುಶಾಂತ್ ಯಾನೆ ಶಾನ್ (31) ಒಟ್ಟು 18 ವರ್ಷ 1 ತಿಂಗಳು ಸಜೆ ವಿಧಿಸಿ ಆದೇಶ ನೀಡಿದೆ.
ಐಪಿಸಿ ಸೆಕ್ಷನ್ 341 ಶಿಕ್ಷಾರ್ಹ ಕಲಂಗೆ 1 ತಿಂಗಳು ಸಜೆ. 326 ಶಿಕ್ಷಾರ್ಹ ಕಲಂಗೆ 7 ವರ್ಷ ಕಠಿಣ ಸಜೆ, 1 ಲಕ್ಷ ರೂ. ದಂಡ. ದಂಡ ಪಾವತಿಗೆ ವಿಫಲನಾದರೆ 1 ವರ್ಷ ಕಠಿಣ ಸಜೆ. 307 ರ ಶಿಕ್ಷಾರ್ಹ ಕಲಂ ಗೆ 10 ವರ್ಷದ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಕಠಿಣ ಸಜೆ. 354 ರ ಶಿಕ್ಷಾರ್ಜ ಕಲಂಗೆ 1 ವರ್ಷದ ಕಠಿಣ ಸಜೆ ಮತ್ತು 10 ಸಾವಿರ ರೂ.ದಂಡ ಪಾವತಿ. ದಂಡ ಪಾವತಿಸಲು ತಪ್ಪಿದ್ದಲ್ಲಿ 2 ತಿಂಗಳು ಕಠಿಣ ಸಜೆ. 309 ಶಿಕ್ಷಾರ್ಹ ಕಲಂಗೆ 1 ಸಾವಿರ ರೂ. ದಂಡ ವಿಧಿಸಲಾಗಿದೆ.
ಈ ಎಲ್ಲಾ ಶಿಕ್ಷೆಗಳನ್ನು ಒಂದರ ನಂತರ ಒಂದು ಪ್ರತ್ಯೇಕವಾಗಿ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ದಂಡದ ರೂಪದಲ್ಲಿ ವಸೂಲಾಗುವ ಹಣದಲ್ಲಿ 2 ಲಕ್ಷ ರೂ.ವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಪ್ರಕರಣದ ವಿವರ:2019, ಜೂ.28 ರಂದು ಕೋಟೆಕಾರು ಗ್ರಾಮದ ದೇರಳಕಟ್ಟೆ ಬಗಂಬಿಲ ರಸ್ತೆಯ ಶಾಂತಿಧಾಮದ ಬಳಿ ಸಂತ್ರಸ್ತ ಯುವತಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸುಶಾಂತ್ ಆಕೆಯನ್ನು ಹಿಂಬಾಲಿಸಿದ್ದು, ನಂತರ ಆಕೆಯನ್ನು ತಡೆದು ಅವಳ ಮೈ ಮೇಲೆ ಕೈ ಹಾಕಿ ಅಸಭ್ಯ ವರ್ತನೆ ಮಾಡಿದ್ದು, ಮಾನಭಂಗ ಮಾಡಿ, ತನ್ನಲ್ಲಿದ್ದ ಚೂರಿಯಿಂದ ಆಕೆಯ ಎದೆಗೆ, ಹೊಟ್ಟೆಗೆ, ವಿವಿಧ ಭಾಗಗಳಿಗೆ ಗಂಭೀರವಾಗಿ ತಿವಿದು ಕೊಲೆ ಮಾಡಲು ಯತ್ನಿಸಿದ್ದ. ಯುವತಿ ಪ್ರಜ್ಞಾಹೀನಳಾಗಿ ಬಿದ್ದ ನಂತರ ಅದೇ ಚೂರಿಯಿಂದ ತನ್ನ ಕುತ್ತಿಗೆಗೆ ಕೈ ನಾಡಿಗೆ ಇರಿಯಲು ಯತ್ನಿಸಿದ್ದು, ಅಸ್ವಸ್ಥಗೊಂಡು ಸ್ಥಳದಲ್ಲೇ ಬಿದ್ದಿದ್ದ. ನಂತರ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಇಬ್ಬರೂ ಚಿಕಿತ್ಸೆಯ ನಂತರ ಗುಣಮುಖರಾಗಿದ್ದರು.
ಇದನ್ನೂ ಓದಿ: Bantwala: ಪತ್ನಿಗೆ ಹಲ್ಲೆಗೈದು 33 ಪವನ್ ಚಿನ್ನ ದೋಚಿದ ಪತಿರಾಯ - ಪತ್ನಿಯಿಂದ ದೂರು ದಾಖಲು
ನೃತ್ಯ ತರಬೇತುದಾರನಾದ ಸುಶಾಂತ್, ಯುವತಿ ಕಲಿಯುತ್ತಿದ್ದ ಕಾಲೇಜಿನಲ್ಲಿ ನೃತ್ಯ ಕಲಿಸುತ್ತಿದ್ದ. ಈತ ಆಕೆಯ ಜೊತೆ ಗೆಳೆತನ ಬೆಳೆಸಿ, ನಂತರ ಪ್ರೀತಿಸು ಎಂದು ದಂಬಾಲು ಬಿದ್ದಿದ್ದ. ಇದರ ಕುರಿತು ಯುವತಿ ಕಾರ್ಕಳದ ಗ್ರಾಮಾಂತರ ಠಾಣೆಯಲ್ಲಿ ಆತನ ವಿರುದ್ಧ ದೂರು ಕೂಡಾ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆತ ನ್ಯಾಯಾಂಗ ಬಂಧನದಲ್ಲಿದ್ದು, ನಂತರ ಜಾಮೀನಿನ ಮೂಲಕ ಹೊರಗಡೆ ಬಂದಿದ್ದ. ಅನಂತರ ಈ ದ್ವೇಷದಿಂದ ಈ ಕೃತ್ಯ ಮಾಡಿದ್ದ ಎಂದು ವರದಿಯಾಗಿದೆ.