Halal Products: ಹಲಾಲ್ ಮಾಂಸ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?! ಕೇಂದ್ರ ಸಚಿವರಿಂದ ಅಚ್ಚರಿ ಸ್ಟೇಟ್ಮೆಂಟ್
Halal Products: ಹಲಾಲ್ ಮಾಂಸದ (Halal Products) ವಿಚಾರ ಮತ್ತೆ ಚರ್ಚೆಗೆ ಗುರಿಯಾಗಿದ್ದು, ಬಿಹಾರದ ಬೇಗುಸರಾಯ್ಯಲ್ಲಿ ಭಾನುವಾರ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ (Union Rural Development Minister) ಗಿರಿರಾಜ್ ಸಿಂಗ್ (Giriraj Singh) ʼʼಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವುದನ್ನು ತ್ಯಜಿಸಬೇಕು ಮತ್ತು ಒಂದೇ ಹೊಡೆತದಿಂದ ಕೊಲ್ಲಲ್ಪಟ್ಟ ಪ್ರಾಣಿಗಳ ಮಾಂಸವಾದ ‘ಜಟ್ಕಾ’ (Jhatka) ಅನ್ನು ಮಾತ್ರ ಸೇವಿಸಬೇಕುʼʼ ಎಂದು ಜನರಿಗೆ ಕರೆ ನೀಡಿದ್ದಾರೆ.
ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮ ‘ಧರ್ಮ’ವನ್ನು ಹಾಳು ಮಾಡುವುದಿಲ್ಲ ಎಂದು ಅವರ ಬೆಂಬಲಿಗರು ಈ ಸಂದರ್ಭದಲ್ಲಿ ಪ್ರತಿಜ್ಞೆ ಕೈಗೊಂಡರು. ʼʼಹಲಾಲ್ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರನ್ನು ನಾನು ಮೆಚ್ಚುತ್ತೇನೆ. ಈಗ ಹಿಂದೂಗಳು ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳಿಗೆ ಇದೇ ರೀತಿಯ ಬದ್ಧತೆಯನ್ನು ಪ್ರದರ್ಶಿಸಬೇಕುʼʼ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ʼʼಹಿಂದೂ ವಧೆಯ ವಿಧಾನವೆಂದರೆ ಅದು ಜಟ್ಕಾ. ಹಿಂದೂಗಳು ಪ್ರಾಣಿ ಬಲಿ ಮಾಡಿದಾಗಲೆಲ್ಲ ಒಂದೇ ಹೊಡೆತಕ್ಕೆ ಕೊಲ್ಲುತ್ತಾರೆ. ಆದ್ದರಿಂದ ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮನ್ನು ಭ್ರಷ್ಟಗೊಳಿಸಬಾರದು. ಯಾವಾಗಲೂ ಜಟ್ಕಾ ವಿಧಾನವನ್ನೇ ಆಯ್ದುಕೊಳ್ಳಬೇಕು” ಎಂದು ಗಿರಿರಾಜ್ ಸಿಂಗ್ ಕಿವಿಮಾತು ಹೇಳಿದ್ದಾರೆ.
ಈ ಕುರಿತು ಕೆಲವು ವಾರಗಳ ಹಿಂದೆ ಗಿರಿರಾಜ್ ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದು ನೆರೆಯ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಸ್ಫೂರ್ತಿ ಪಡೆದು ʼಹಲಾಲ್ʼ ಎಂದು ಲೇಬಲ್ ಮಾಡಲಾದ ಆಹಾರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ ಕೋರಿದ್ದರು.
ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿತ್ತು. ಜನರ ಆರೋಗ್ಯದ ದೃಷ್ಟಿಯಿಂದ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರವು ಆದೇಶದಲ್ಲಿ ಉಲ್ಲೇಖಿಸಿತ್ತು. “ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳು, ಔಷಧಗಳು ಸೇರಿ ಯಾವುದೇ ವಸ್ತುಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ” ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು ಎಂದರು.