Dakshina Kannada: ರಸ್ತೆಬದಿ , ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ರಾಶಿ : ಮೇ 20ರೊಳಗೆ ತೆರವುಗೊಳಿಸಿ ವರದಿ ನೀಡುವಂತೆ ಜಿ.ಪಂ.ಸಿಇಓ ಸೂಚನೆ
Dakshina Kannada: ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ರಾಶಿ ಹಾಕಿಗೊಂಡಿದ್ದು, ಅವುಗಳನ್ನು ತೆರವುಗೊಳಿಸಿ ಮೇ 20ರೊಳಗೆ ವರದಿ ನೀಡಬೇಕು.ಈ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ| ಆನಂದ್ ಕೆ. ಅವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: PG Courses: ಸ್ನಾತಕೋತ್ತರ ಪದವಿ ಶಿಕ್ಷಣಕ್ಕಾಗಿ ಕಾಲೇಜನ್ನು ಹುಡುಕುತ್ತಿದ್ದೀರ? ಇಲ್ಲಿದೆ ನೋಡಿ ಅವಕಾಶ!
ರಸ್ತೆಬದಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸುರಿಯಲಾಗಿರುವ ತ್ಯಾಜ್ಯಗಳನ್ನು ಮಳೆಗಾಲ ಪ್ರಾರಂಭವಾಗುವ ಮುನ್ನ ತೆರವುಗೊಳಿಸಬೇಕು. ಈ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಛಾಯಾಚಿತ್ರ ಸಹಿತ ವರದಿಯನ್ನು ಮೇ 20ರೊಳಗೆ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: Puttur: ಚಿಕಿತ್ಸೆ ಸರಿಯಾಗಿ ನೀಡದ ಆರೋಪ- ವ್ಯಕ್ತಿ ಸಾವು! ದೂರು ದಾಖಲು
ಪ್ರತೀ ತಾಲೂಕಿನಲ್ಲಿ ಅಧಿಕವಾಗಿ ತ್ಯಾಜ್ಯ ಬೀಳುವ 5 ಗ್ರಾ.ಪಂ.ಗಳಲ್ಲಿ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ. ಗ್ರಾ.ಪಂ.ನ ಎಲ್ಲ ಭಾಗೀದಾರರು ಮತ್ತು ಸಾರ್ವಜನಿಕರನ್ನು ಶ್ರಮದಾನದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ಬೀಳುವ ಎಲ್ಲಾ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳನ್ನು ಶುಚಿಗೊಳಿಸಿ, ಸುಂದರವಾಗಿಸಲು ಯೋಜನೆ ರೂಪಿಸಬೇಕು. ತ್ಯಾಜ್ಯ ಉತ್ಪಾದನೆಯಾಗುವ ಮನೆ ಮತ್ತು ವಾಣಿಜ್ಯ ಅಂಗಡಿಗಳ ಹಂತದಲ್ಲೇ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಬೇಕು. ತ್ಯಾಜ್ಯ ಸಂಗ್ರಹಣೆ ಮಾಡಲು ಕ್ರಮ ಕೈಗೊಳ್ಳಬೇಕು. ಸ್ವಚ್ಛ ಸಂಕೀರ್ಣ ಘಟಕದಲ್ಲಿ ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ನಿರ್ವಹಿಸಬೇಕಾಗಿದ್ದು, ಒಣಕಸವನ್ನು ವಿಂಗಡಿಸಿ ಎಂಆರ್‌ಎಫ್ ಘಟಕಕ್ಕೆ ರವಾನಿಸಲು ಶೇಖರಿಸಿ ಇಡಬೇಕು. ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ತ್ಯಾಜ್ಯ ಬೀಳದಂತೆ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಥವಾ ಗ್ರಾ.ಪಂ.ಗಳು ಸಂಗ್ರಹಿಸುವ ತ್ಯಾಜ್ಯವನ್ನು, ಸುಡುವುದಕ್ಕೆ ಮತ್ತು ಭೂಭರ್ತಿ ಮಾಡುವುಕ್ಕೆ ಅವಕಾಶ ನೀಡಬಾರದು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆಯ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತೀ ಗ್ರಾ.ಪಂ.ಗೆ ಒಂದು ಕಾಲೇಜು/ವಿದ್ಯಾಸಂಸ್ಥೆ/ಸರಕಾರೇತರ ಸಂಸ್ಥೆಯನ್ನು ಗೊತ್ತುಪಡಿಸಿ, ಅವುಗಳಿಗೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಡಿ ಗ್ರಾ.ಪಂ.ಗಳನ್ನು ದತ್ತು ನೀಡುವ ಮೂಲಕ ಆ ಸಂಸ್ಥೆಯ ವಿದ್ಯಾರ್ಥಿಗಳು/ ಸ್ವಯಂ ಸೇವಕರ ಮೂಲಕ ಶ್ರಮದಾನ ಮತ್ತು ಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸೂಚಿಸಲಾಗಿದೆ.
45 ಗ್ರಾ.ಪಂ.ಗಳಲ್ಲಿ ಬ್ಲ್ಯಾಕ್‌ಸ್ಪಾಟ್
ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕು ವ್ಯಾಪ್ತಿಯ 45 ಗ್ರಾ.ಪಂ. ವ್ಯಾಪ್ತಿ ಬ್ಲ್ಯಾಕ್‌ಸ್ಪಾಟ್ ಪ್ರದೇಶ ಎಂದು ಗುರುತಿಸಲಾಗಿದೆ.
ಪುತ್ತೂರು ತಾಲೂಕಿನ ಕಬಕ, ಆರ್ಯಾಪು, ಉಪ್ಪಿನಂಗಡಿ, ನೆಕ್ಕಿಲಾಡಿ, ಒಳಮೊಗ್ರು,ಕಡಬ ತಾಲೂಕಿನ ಸುಬ್ರಹ್ಮಣ್ಯ,ಶಿರಾಡಿ, ಆಲಂಕಾರು, ನೆಲ್ಯಾಡಿ, ಸವಣೂರು,
ಬಂಟ್ವಾಳ ತಾಲೂಕಿನ ಕನ್ಯಾನ, ಸಜಿಪ ಮುನ್ನೂರು, ಮಾಣಿ, ಪುದು, ನರಿಕೊಂಬು, ಬೆಳ್ತಂಗಡಿ ತಾಲೂಕಿನ ಮಾಲಾಡಿ, ಕುವೆಟ್ಟು, ತಣ್ಣೀರುಪಂತ, ಚಾರ್ಮಾಡಿ, ಉಜಿರೆ, , ಮಂಗಳೂರು ತಾಲೂಕಿನ ಅಡ್ಯಾರು, ನೀರುಮಾರ್ಗ, ಗಂಜಿಮಠ, ಗುರುಪುರ, ಮೂಡುಶೆಡ್ಡೆ, ಮೂಡು ಬಿದಿರೆ ತಾಲೂಕಿನ ಪುತ್ತಿಗೆ, ಬೆಳುವಾಯಿ, ತೆಂಕಮಿಜಾರು, ಪಡುಮಾರ್ನಾಡು, ಕಲ್ಲಮುಂಡ್ಕೂರು, ಮೂಲ್ಕಿಯ ಹಳೆಯಂಗಡಿ, ಪಡು ಪಣಂಬೂರು, ಕೆಮ್ರಾಲ್, ಕಿಲ್ಪಾಡಿ, ಬಳ್ಕುಂಜೆ, ಸುಳ್ಯ ತಾಲೂಕಿನ ಕನಕಮಜಲು, ಜಾಲ್ಸೂರು, ಸಂಪಾಜೆ, ಬೆಳ್ಳಾರೆ, ಅಲೆಟ್ಟಿ, ಉಳ್ಳಾಲ ತಾಲೂಕಿನ ಅಂಬ್ಲಿಮೊಗರು, ಕೊಣಾಜೆ, ಪಜೀರು, ಮಂಜನಾಡಿ, ಬೆಳ್ಮ ಗ್ರಾ. ಪಂ.ಗಳನ್ನು ಗುರುತು ಮಾಡಲಾಗಿದೆ.
ಈ ಗ್ರಾ.ಪಂ.ಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಛಾಯಾಚಿತ್ರ ಸಹಿತ ವರದಿಯನ್ನು ಮೇ 20ರೊಳಗೆ ಕಚೇರಿಗೆ ಸಲ್ಲಿಸಬೇಕು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ| ಆನಂದ್ ಕೆ. ಅವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.