Veteran Actress Leelavathi: ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ಹೇಗಿದೆ? ಇವರ ಜೀವನದ ಕುರಿತ ಕಿರು ಚಿತ್ರಣ ಇಲ್ಲಿದೆ!
Veteran Actress Leelavathi: ಹಿರಿಯ ನಟಿ ಲೀಲಾವತಿ ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ ರಂಗಭೂಮಿ ಬಗ್ಗೆ ಚಿಕ್ಕವಯಸ್ಸಿನಲ್ಲೇ ಅತೀವ ಆಸಕ್ತಿ ಹೊಂದಿದ್ದ ಲೀಲಾವತಿ ಅವರು ತಮ್ಮ ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ.
ಇವರ ಸಿನಿಮಾ ಜರ್ನಿ 1950 ರಲ್ಲಿ ಆರಂಭವಾಗುತ್ತದೆ. ಲೀಲಾವತಿ (Veteran Actress Leelavathi)ಅವರು ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ಡಾ.ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ. ರಾಣಿಹೊನ್ನಮ್ಮ ಸಿನಿಮಾ ಯಶಸ್ಸು ಕಂಡ ಬಳಿಕ ಡಾ.ರಾಜ್‌ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ಲೀಲಾವತಿ ಅವರು ಕೆಲವು ಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಕೂಡಾ ಗುರುತಿಸಿಕೊಂಡಿದ್ದರು.
ಲೀಲಾವತಿಯವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದೆ. ಕರ್ನಾಟಕ ಸರಕಾರವು ಇವರಿಗೆ ಚಲನಚಿತ್ರರಂಗದ ಜೀವಮಾನಸಾಧನೆಗೆ ನೀಡುವ ಅತ್ಯುನ್ನತ್ತ ಪ್ರಶಸ್ತಿ ಡಾ.ರಾಜ್‌ಕುಮಾರ್ ಪ್ರಶಸ್ತಿಯನ್ನು 1999-2000ನೇ ಸಾಲಿನಲ್ಲಿ ನೀಡಿ ಗೌರವಿಸಿದೆ. ತುಮಕೂರು ವಿಶ್ವವಿದ್ಯಲಯ ಗೌರವ ಡಾಕ್ಟರೇಟ್ ಪದವಿಯನ್ನು 2008 ರಲ್ಲಿ ನೀಡಿದೆ.
ಸುಮಾರು 600 ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಲೀಲಾವತಿ ಅವರು ಇದೀಗ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಇವರನ್ನು ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು ಭೇಟಿ ನೀಡಿ ಆರೋಗ್ಯವಿಚಾರಿಸಿಕೊಳ್ಳುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಲೀಲಾವತಿ ಅವರು ಹಾಸಿಗೆ ಹಿಡಿದಿದ್ದು, ಆಹಾರ ಸೇವಿಸುತ್ತಿಲ್ಲ. ಇತ್ತೀಚೆಗಷ್ಟೇ ಇವರ ಮನೆಗೆ ಅರ್ಜುನ್ ಸರ್ಜಾ, ದರ್ಶನ್ ಸೇರಿದಂತೆ ಹಲವು ನಟರು ಮನೆಗೆ ಭೇಟಿ ನೀಡಿ ಹಿರಿಯ ನಟಿಯ ಆರೋಗ್ಯ ವಿಚಾರಿಸಿದ್ದಾರೆ.