D.K: ಯುವಕ ನಾಪತ್ತೆ ; ಹೊಳೆಗೆ ಬಿದ್ದಿರುವ ಶಂಕೆ
D.K: ಕಾಣಿಯೂರು: ಕಡಬ ತಾಲೂಕಿನ ಕಾಯಿಮಣ ಗ್ರಾಮದ ನಾಯಿತಡ್ಕ ಎಂಬಲ್ಲಿನ ಅವಿವಾಹಿತ ಯುವಕನೋರ್ವ ಸೋಮವಾರ
ಸಂಜೆಯಿಂದ ನಾಪತ್ತೆಯಾಗಿದ್ದು , ಆತ ಹೊಳೆಗೆ ಹಾರಿರಬಹುದು ಎಂಬ ಶಂಕೆಯಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.
ನಾಪತ್ತೆಯಾದ ಯುವಕನನ್ನು ಕಾಯಿಮಣ ಗ್ರಾಮದ ನಾಯಿತ್ತಡ್ಕ ನಿವಾಸಿ ಹುಕ್ರ ಎಂಬವರ ಪುತ್ರ ಸುರೇಶ (40) ರಂದು ಗುರುತಿಸಲಾಗಿದೆ.
ಸುರೇಶ್ ಕೂಲಿ ಕೆಲಸ ಮಾಡುತ್ತಿದ್ದು, ವಿಪರಿತ ಮಧ್ಯಪಾನ ಸೇವಿಸುವ ಚಟ ಹೊಂದಿದ್ದರು, ಇದರಿಂದ ಸರಿಯಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುತ್ತಿದ್ದರು. ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿ ಯಾರೊಂದಿಗೂ ಹೆಚ್ಚಾಗಿ ಮಾತನಾಡದೇ ಇರುತ್ತಿದ್ದರು.
ಸೋಮವಾರ ರಾತ್ರಿ ಸುಮಾರು ೮.೩೦ ಗಂಟೆಗೆ ಯಾರಿಗೂ ಹೇಳದೇ ಮನೆಯಿಂದ ಹೋದವನು ಮಂಗಳವಾರ ಬೆಳಿಗ್ಗೆ ೬ಗಂಟೆಯವರೆಗೂ ಬಾರದೇ ಇದ್ದುದರಿಂದ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ಸುರೇಶ್ ಸಹೋದರ ಚಿದಾನಂದ ಬೆಳ್ಳಾರೆ ಠಾಣೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ನಾಪತ್ತೆಯಾಗಿರುವ ಸುರೇಶ್ ಅವರನ್ನು ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ ಕಾಪೆಜಾಲು ಹೊಳೆ ಬದಿಯಲ್ಲಿ ಶರ್ಟ್ ಮತ್ತು ಛತ್ರಿ ಪತ್ತೆಯಾಗಿದ್ದು, ಸುರೇಶ್ ಹೊಳೆಗೆ ಬಿದ್ದಿರಬಹುದು ಎನ್ನುವ ಸಂಶಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರು ಯುವಕನಿಗಾಗಿ ಹುಡುಕಾಟ ನಡೆಸಿದರು..
ಹೊಳೆ ನೀರಿನಲ್ಲಿ ಇಳಿ ಸಂಜೆಯ ತನಕ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ . ಸ್ಥಳಕ್ಕೆ ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಪಿಡಿಓ ನಾರಾಯಣ್, ಗ್ರಾಮ ಆಡಳಿತಾಧಿಕಾರಿ ಪುಷ್ಪರಾಜ್, ಗ್ರಾ.ಪಂ. ಸದಸ್ಯರಾದ ಪ್ರವೀಣ್ ಕೆರೆನಾರು, ಮೋಹನ್ ಅಗಳಿ, ರವಿಕುಮಾರ್ ಕೆಡೆಂಜಿ, ಉಮೇಶ್ವರಿ ಅಗಳಿ, ಗ್ರಾಮ ಸಹಾಯಕ ಪ್ರೀತಮ್ ಬೆಳಂದೂರು ಭೇಟಿ ನೀಡಿದ್ದಾರೆ.