Parliament Election: ಲೋಕಸಭಾ ಚುನಾವಣೆಗೆ ಪುತ್ತಿಲ ಸ್ಪರ್ಧೆ; ಪುತ್ತೂರಲ್ಲಿ ಬಿಜೆಪಿ ಕೋರ್ ಕಮಿಟಿ ತುರ್ತು ಸಭೆ
Puttur: ಲೋಕಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಸ್ಪರ್ಧಿಯಾಗಿ ಸ್ಪರ್ಧೆ ಮಾಡಲಿರುವ ಕುರಿತು ಈಗಾಗಲೇ ವರದಿಯಾಗಿತ್ತು. ಹಾಗೂ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ದ.ಕ.ಜಿಲ್ಲೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಮಾಡಲಿದೆ ಎಂದು ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಬಹಿರಂಗ ಹೇಳಿಕೆ ಕೂಡಾ ನೀಡಿದ್ದರು. ಇದಾದ ನಂತರ ಮಾ.1ರಂದು ಸಂಜೆ ಪುತ್ತೂರಿನಲ್ಲಿ ಬಿಜೆಪಿ ಕೋರ್ ಕಮಿಟಿಯ ತುರ್ತು ಸಭೆ ನಡೆಸಲಾಗಿರುವ ಕುರಿತು ವರದಿಯಾಗಿದೆ. ಈ ಕುರಿತು ಚರ್ಚೆ ಕೂಡಾ ನಡೆದಿದೆ ಎನ್ನಲಾಗಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಬೇಷರತ್ ಆಗಿ ಪಕ್ಷಕ್ಕೆ ಬರುವುದಾದರೆ ಸ್ವಾಗತ, ಪಕ್ಷಕ್ಕೆ ಬಂದ ನಂತರ ಹುದ್ದೆ ವಿಚಾರವನ್ನು ಪ್ರಮುಖರು ನಿರ್ಧಾರ ಮಾಡಲಿದ್ದಾರೆ ಎಂದು ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನವಾಗಿದೆ. ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರನ್ನು ಪುತ್ತೂರು ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡುವ ಕುರಿತು ಕೂಡಾ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಬರುವುದಾದರೆ ಇನ್ನೂ ಅವಕಾಶ ನೀಡುವುದು,ಪಕ್ಷದ ಜಿಲ್ಯಾಧ್ಯಕ್ಷ ಸತೀಶ್ ಕುಂಪಲ ಅವರ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಮಾ.2 ರಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.