Puttur: ಪುತ್ತಿಲ ಪರಿವಾರದ ನಡೆಯತ್ತ ಮೂಡಿದೆ ಭಾರೀ ಕುತೂಹಲ; ಷರತ್ತು ಇಲ್ಲದೆ ಪಕ್ಷ ಸೇರ್ಪಡೆ- ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ
Puttur: "ಷರತ್ತು ಇಲ್ಲದೆ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಪುತ್ತಿಲ ಪರಿವಾರದ ಅರುಣ್ ಪುತ್ತಿಲ ಅವರಿಗೆ ಸೂಚಿಸಿದ್ದೇನೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿಕೆ ನೀಡಿರುವ ಕುರಿತು ಇದೀಗ ಭಾರೀ ಚರ್ಚೆಯಾಗಿದೆ.
ಅರುಣ್ ಪುತ್ತಿಲ ಹಾಗೂ ಬಿ.ವೈ. ವಿಜಯೇಂದ್ರ ನಡುವೆ ಮಾತುಕತೆ ನಡೆದಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಈಗ ರಾಜ್ಯಾಧ್ಯಕ್ಷರೇ ಇದನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಬಹಿರಂಗ ಹೇಳಿಕೆಯ ಮೂಲಕ ಪುತ್ತಿಲ ತನ್ನನ್ನು ಭೇಟಿ ಆಗಿರುವುದಾಗಿ ಹೇಳಿದ್ದಾರೆ.
ಯಾವುದೇ ಷರತ್ತುಗಳು ಬೇಡ, ಪ್ರಧಾನಿ ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು, ಬೇಷರತ್ ಆಗಿ ಬಿಜೆಪಿಗೆ ಸೇರ್ಪಡೆಯಾಗಿ ಎಂದು ಅರುಣ್ ಪುತ್ತಿಲ ಅವರಿಗೆ ಸೂಚಿಸಿರುವುದಾಗಿ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡುವುದಾಗಿಯೂ, ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ, ಕಮಲ ಚಿಹ್ನೆಯಷ್ಟೇ ಅಭ್ಯರ್ಥಿ ಯಾಗಬೇಕು. ಬೇರೆ ಯಾವ ಭಿನ್ನಾಭಿಪ್ರಾಯಗಳೂ ನಮ್ಮ ನಡುವೆ ಇಲ್ಲʼ ಎಂಬುವುದಾಗಿಯೂ ಹೇಳಿದ್ದಾರೆ.
ಇತ್ತ ಕಡೆ ಪುತ್ತಿಲ ಪರಿವಾರ ವಿಜಯೇಂದ್ರ ಅವರ ಹೇಳಿಕೆಯನ್ನು ಸ್ವೀಕರಿಸಲಿದೆಯೇ ಎಂಬುವುದನ್ನು ಕಾದು ನೋಡಬೇಕಿದೆ. ಸ್ಥಾನಮಾನ ನೀಡಿಯೇ ಪುತ್ತಿಲ ಅವರನ್ನು ಸೇರ್ಪಡೆಗೊಳಿಸಬೇಕು ಎಂಬ ಪುತ್ತಿಲ ಪರಿವಾರದ ಬೇಡಿಕೆ ಮನ್ನಣೆ ಸದ್ಯಕ್ಕೆ ಸಿಕ್ಕಿಲ್ಲ. ರಾಜ್ಯಾಧ್ಯಕ್ಷರ ಹೇಳಿಕೆಯಿಂದ ಪುತ್ತಿಲ ತಮ್ಮ ಮುಂದಿನ ನಡೆಯನ್ನು ಯಾವ ರೀತಿ ಇಡುತ್ತದೆ ಎಂಬುವುದು ಕುತೂಹಲಕಾರಿಯಾಗಿದೆ.
ಅಯೋಧ್ಯೆ ಪ್ರವಾಸದಲ್ಲಿರುವ ಪುತ್ತಿಲ ಅವರು ಬಂದ ನಂತರವಷ್ಟೇ ಮುಂದಿನ ನಿರ್ಧಾರ ಎಂದು ಸ್ಪಷ್ಟಗೊಳ್ಳಲಿದೆ.