ಕಾಸ್ಲಿ ಆಗಿದೆ ಸ್ವಾಮಿ 'ಕೊತ್ತೆಮಿರಿ ಸೊಪ್ಪು'!! ಈರುಳ್ಳಿ ಬದಲು ಕ್ಯಾಬೇಜ್ ಹಾಕಿದ್ರು-ಕೊತ್ತೆಮಿರಿ ಬದಲಿಗೆ…..?
ಕಾಸ್ಟ್ಲಿ ಆಗಿದೆ ಸ್ವಾಮಿ ಕೊತ್ಮೀರಿ !!. ಹಿಂದೆ ತರಕಾರಿ ಪರ್ಚೆಸ್ ಮಾಡಿದ ಮೇಲೆ ಚಿಲ್ಲರೆ ಉಳಿದದ್ದರಲ್ಲಿ 5 ರೂಪಾಯಿಗೋ ಅಥವಾ ಹತ್ತಕ್ಕೊ ರೆಟ್ಟೆ ಗಾತ್ರಕ್ಕೆ ಸಿಗುತ್ತಿದ್ದ ಕೊತ್ತಂಬರಿ ಸೊಪ್ಪು ಯಾನೆ ಕೊತ್ತೆಂಬ್ರಿ ಸೊಪ್ಪು ಅಲಿಯಾಸ್, ಸಿಂಪ್ಲಾಗಿ ಹೇಳ್ಬೇಕಂದ್ರೆ ಕೊತ್ಮೀರಿ ಸೊಪ್ಪಿನ ಖದರ್ರೆ ಈಗ ಚೇಂಜ್ ಆಗಿದೆ. ಕೊತ್ತಂಬರಿ ಸೊಪ್ಪು ಕೊಂಡು, ಏನಾದರೂ ದುಡ್ಡು ಉಳಿದ್ರೆ ಅದರಲ್ಲಿ ಉಳಿದ ಸಾಮಾನು ಕೊಳ್ಳುವಷ್ಟು ಬೆಲೆ ಏರಿ ಕುಳಿತಿದೆ ಕೊತ್ತಂಬರಿ ಸೊಪ್ಪು.
ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮ ನೇರ ಹೊಟ್ಟೆಯ ಮೇಲೆ ಹೊಡೆದಂತಾಗಿದ್ದು, ದಿನಬಳಕೆ ವಸ್ತುಗಳ ಜೊತೆಗೆ ಅಡುಗೆಗೆ ಅಗತ್ಯವಾಗಿರುವ ಕೊತ್ತಂಬರಿ ಸೊಪ್ಪಿನ ಬೆಲೆಯೂ ಏಕಾಏಕಿ ದ್ವಿಶತಕ ಬಾರಿಸಿದೆ.ಹಳ್ಳಿಯ ಅಂಗಡಿಗಳಲ್ಲಿ 10 ರೂಪಾಯಿಗೆ ಒಂದೆರಡು ಕಟ್ಟು ಸಿಗುತ್ತಿದ್ದ ಕೊತ್ತಂಬರಿ ಸೊಪ್ಪು ಕೆ.ಜಿ ಗೆ 220 ರೂ ದಾಟಿದ ಪರಿಣಾಮ ಅಡುಗೆ ಮನೆಯಿಂದ ಮೂಗಿಗೆ ರಾಚುತ್ತಿದ್ದ ಕೊತ್ತಂಬರಿ ಘಮ ಇಲ್ಲದಂತಾಗಿದೆ.
ಹಳ್ಳಿಗಳಿಗೆ ಹಾಗೂ ಪೇಟೆಯ ಅಂಗಡಿಗಳಿಗೆ ಬರುವ ತರಕಾರಿ ವಾಹನಗಳಲ್ಲಿ ಲೋಡ್ ಗಟ್ಟಲೆ ಇರುತ್ತಿದ್ದ ಕೊತ್ತಂಬರಿ ಸೊಪ್ಪಿನ ಕಟ್ಟುಗಳು, ಮಾರಲು ಯೋಗ್ಯವಲ್ಲದ ತರಕಾರಿ ಜೊತೆಗೆ ರಸ್ತೆಬದಿಯಲ್ಲಿ ಎಸೆಯುವ ಸೊಪ್ಪಿನ ಕಟ್ಟುಗಳು ನಾಪತ್ತೆಯಾಗಿದೆ. ಸೋಡಾದ ರೀತಿಯೇ ಕೊತ್ತಂಬರಿ ಸೊಪ್ಪು ಕೂಡಾ ಫ್ರೆಂಡ್ಶಿಪ್ ವಿಷಯದಲ್ಲಿ ಸದಾ ಮುಂದು. ವೆಜ್ ಇರಲಿ ನಾನ್ ವೆಜ್ ಇರಲಿ, ಎಲ್ಲರ ಜತೆ ಸೇರಿ ಸಂಭ್ರಮದ ಜತೆಗೆ ಘಮ ಹೆಚ್ಚಿಸುವ ನಿಟ್ಟಿನಲ್ಲಿ ಕೊತ್ಮೀರಿ ಸೊಪ್ಪು ಸದಾ ಮುಂದು. ಸಂಜೆಯಾಗುತ್ತಲೇ ಪೇಟೆ ಪಟ್ಟಣಗಳ ರಸ್ತೆ ಬದಿಯಲ್ಲಿ ಘಮ-ಘಮಿಸುವ ಪಾನಿಪುರಿ, ಮಸಾಲ ಪುರಿ,ಗೋಬಿ ಮಂಚೂರಿ ಮುಂತಾದವುಗಳ ಪ್ಲೇಟ್ ನಲ್ಲಿ ಸಿಂಗರಿಸಿದಂತೆ ಇರುತ್ತಿದ್ದ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು ಬೆಲೆ ಏರಿಕೆಯ ಬೆನ್ನಲ್ಲೇ ಕಾಣೆಯಾಗಿದೆ.
ಕಳೆದ ಬಾರಿ ಈರುಳ್ಳಿಗೆ ಬೆಲೆ ಏರಿಕೆಯಾಗಿದ್ದು, ಆ ಸಮಯದಲ್ಲಿ ಈರುಳ್ಳಿ ಬದಲಿಗೆ ಹೂಕೋಸು ಹಾಕಿ ಗರಿಗರಿ ತಿಂಡಿಗಳ ಮಾಡುತ್ತಿದ್ದ ಮಂದಿಗಳಿಗೆ ಕೊತ್ತೆಮಿರಿ ಸೊಪ್ಪಿನ ಬದಲಿಗೆ ಯಾವುದೂ ಆಲ್ಟರ್ನೇಟಿವ್ ಸಿಗದೆ ನಿರಾಸೆಯಾಗಿದೆ. ಇದೆಲ್ಲಾ ಕಾರಣಗಳಿಂದ ಅಡುಗೆ ಮನೆಯಲ್ಲಿ ಚೌಕಾಸಿ ಮಾಡುತ್ತಿರುವುದು ಕಂಡುಬಂದಿದೆ.ಮಾರುಕಟ್ಟೆಯಲ್ಲಿ ಕೆಜಿ ಗೆ ಅಷ್ಟು ಬೆಲೆ ಕೊಟ್ಟು ಕೊಂಡುಕೊಳ್ಳುವವರ ಸಂಖ್ಯೆ ವಿರಳವಾಗಿದ್ದು, ಮಾರುಕಟ್ಟೆಗೆ ಲಾರಿಗಳಲ್ಲಿ ಬರುತ್ತಿದ್ದ ಸೊಪ್ಪಿನ ಕಂತೆಯೂ ಕ್ಷೀಣಿಸಿದೆ.
ರಣಭೀಕರ ಮಳೆಯಿಂದಾಗಿ ಇಷ್ಟೆಲ್ಲಾ ಅಂವಾತರ ನಡೆದಿದ್ದು, ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಕೊತ್ತೆಮಿರಿ ಸೊಪ್ಪು ತಾನೂ ಯಾರಿಗೂ ಕಮ್ಮಿ ಇಲ್ಲ, ತನಗೂ ಒಂದು ಡಿಮ್ಯಾಂಡ್ ಕ್ರಿಯೇಟ್ ಆಗಿದೆ ಎಂದು ಬೀಗುತ್ತಿದೆ.