CAA: ಸದ್ಯದಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ- ಇಲ್ಲಿದೆ ಬಿಗ್ ಅಪ್ಡೇಟ್
CAA: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಪ್ರಮುಖವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಈ ಕಾನೂನು ಜಾರಿಯಾಗಲಿದೆ ಎಂಬ ವಿಚಾರವೊಂದು ಸದ್ಯ ಹೊರಬಿದ್ದಿದೆ.
ಹೌದು, ಕೇಂದ್ರದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು 2019 ರ ಪೌರತ್ವ (ತಿದ್ದುಪಡಿ) ಕಾಯ್ದೆ (CAA) ಮತ್ತು 2023ರ ಮೂರು ಹೊಸ ಕ್ರಿಮಿನಲ್ ಕಾನೂನುಗಳ ನಿಯಮಗಳನ್ನ ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲೇ ತಿಳಿಸಲಾಗುವುದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ನಾವು ಶೀಘ್ರದಲ್ಲೇ ಸಿಎಎಗಾಗಿ ನಿಯಮಗಳನ್ನ ಹೊರಡಿಸಲಿದ್ದೇವೆ. ನಿಯಮಗಳನ್ನ ಹೊರಡಿಸಿದ ನಂತರ, ಕಾನೂನನ್ನು ಜಾರಿಗೆ ತರಬಹುದು ಮತ್ತು ಅರ್ಹರಿಗೆ ಭಾರತೀಯ ಪೌರತ್ವವನ್ನ ನೀಡಬಹುದು" ಎಂದು ಅಧಿಕಾರಿ ಹೇಳಿದರು.
ಇದನ್ನು ಓದಿ: Belagavi assualt case: ಅಂಗನವಾಡಿ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ!!
ಏನಿದು ಪೌರತ್ವ ತಿದ್ದುಪಡಿ ಕಾಯ್ದೆ ?
ಪೌರತ್ವ (ತಿದ್ದುಪಡಿ) ಮಸೂದೆ 2019, 1955ರಲ್ಲಿ ಜಾರಿಗೆ ತರಲಾಗಿದ್ದ ನಾಗರಿಕ ಕಾಯ್ದೆಗೆ ತಿದ್ದುಪಡಿಯಾಗಿದೆ. ಮುಸ್ಲಿಂ ಧರ್ಮೀಯರು ಬಹುಸಂಖ್ಯೆಯಲ್ಲಿರುವ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳ ಮುಸ್ಲಿಂಯೇತರ ನಿರಾಶ್ರಿತರಿಗೆ, ಅಲ್ಲಿ ಧಾರ್ಮಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಕಂಡುಕೊಂಡು ಬಂದಿರುವ ನಾಗರಿಕರಿಗೆ ಭಾರತದ ಪೌರತ್ವ ನೀಡುವ ಮಸೂದೆಯಾಗಿದೆ. ಒಂದು ಬಾರಿ ಈ ತಿದ್ದುಪಡಿ ವಿದೇಯಕ ಜಾರಿಗೆ ಬಂದರೆ ಈ ಮೂರೂ ದೇಶಗಳ ಹಿಂದೂ, ಸಿಖ್, ಕ್ರೈಸ್ತ, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯದ ವಲಸಿಗರಿಗೆ ಭಾರತದ ಪೌರತ್ವ ಸಿಗುತ್ತದೆ. ಅವರು ಅಕ್ರಮ ವಲಸಿಗರು ಎಂದು ನಂತರ ಪರಿಗಣಿಸಲಾಗುವುದಿಲ್ಲ.
ಭಾರತದ ಪೌರತ್ವ ಪಡೆಯಲು ಯಾರು ಅರ್ಹರು?
ಸಹಜವಾಗಿ ಭಾರತದ ಪೌರತ್ವ ಗಳಿಸಲು ಬೇಕಾದ ಮುಖ್ಯ ಅರ್ಹತೆಯೆಂದರೆ ವಲಸಿಗ ಕಳೆದ 12 ತಿಂಗಳಿನಿಂದ ಭಾರತದಲ್ಲಿ ನೆಲೆಸಿರಬೇಕು. ಮತ್ತು ಈ ಹಿಂದಿನ 14 ವರ್ಷಗಳಲ್ಲಿ ಅವರು ಭಾರತದಲ್ಲಿ 11 ವರ್ಷ ನೆಲೆಸಿರಬೇಕಾಗುತ್ತದೆ. ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಈ ಮೂರು ದೇಶಗಳ ಆರು ಧರ್ಮೀಯರಿಗೆ ಮಾತ್ರ 11 ವರ್ಷಗಳ ಬದಲು 6 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ ಇಲ್ಲಿನ ಪೌರತ್ವ ಸಿಗುತ್ತದೆ. ಆ ದೇಶಗಳಿಂದ ಗಡಿಪಾರಿಗೆ ಒಳಗಾಗಿರಬಾರದು, 1946ರ ವಿದೇಶಿ ಕಾಯ್ದೆ ಮತ್ತು 1920ರ ಪಾಸ್ ಪೋರ್ಟ್ ಕಾಯ್ದೆ (ಭಾರತಕ್ಕೆ ಪ್ರವೇಶ)ಯಡಿ ಜೈಲಿಗೆ ಹೋಗಿ ಬಂದಿರಬಾರದು.