UP: ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋತಿದ್ದು ಈ 3 ಕಾರಣಗಳಿಂದ !!
UP: ಲೋಕಸಭಾ ಚುನಾವಣೆಯಲ್ಲಿ(Parliament Election) ಬಿಜೆಪಿ(BJP) ಒಂದು ಹಂತಕ್ಕೆ ಮಕಾಡೆ ಮಲಗಿದೆ. ಬಿಜೆಪಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಉತ್ತರ ಪ್ರದೇಶ ಎಂದೇ ಹೇಳಬಹುದು. ಸುಮಾರು 80 ರಷ್ಟು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಈ ಹಿಂದೆ ಎರಡು ಬಾರಿ ಬಿಜೆಪಿ 70ಕ್ಕೂ ಅಧಿಕ ಸ್ಥಾನ ಗೆದ್ದು ಜಯಭೇರಿ ಬಾರಿಸಿತ್ತು. ಆದರೆ ಈ ಸಲ ಕೇವಲ 30ರ ಆಸುಪಾಸಿನಲ್ಲಿ ತೃಪ್ತಿ ಪಟ್ಟುಕೊಂಡಿದೆ.
ಉತ್ತರ ಪ್ರದೇಶ(Uttar Pradesh) ದೇಶದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ. ಈ ರಾಜ್ಯದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಅದು ದೇಶದ ಅಧಿಕಾರ ಹಿಡಿಯುತ್ತದೆ ಎಂಬ ಮಾತಿದೆ. ಅಖಿಲೇಶ್ ಯಾದವ್ ಅವರ ಸಾಮ್ರಾಜ್ಯವಾಗಿದ್ದು ಯುಪಿ ಇತ್ತೀಚೆಗೆ 10 ವರ್ಷಗಳ ಬಳಿಕ ಬಿಜೆಪಿ ಭದ್ರಕೋಟೆ ಆಗಿ ಮಾರ್ಪಟ್ಟತ್ತು.
ಇದನ್ನೂ ಓದಿ: ಸರ್ಕಾರ ರಚಿಸಲು ಬಿಜೆಪಿಗೆ ಮಿತ್ರ ಪಕ್ಷಗಳು ಇಟ್ಟ ಬೇಡಿಕೆ ಏನು?!ಕೊನೆಗೂ ಸಂಕಷ್ಟಕ್ಕೆ ಸಿಲುಕಿದ ಬಿಜೆಪಿ
ಹೌದು, 2014ರಲ್ಲಿ ಯಾರೂ ಊಹಿಸದ ರೀತಿಯಲ್ಲಿ 80ರಲ್ಲಿ 71 ಸ್ಥಾನಗಳನ್ನು ಗೆದ್ದು ಬೀಗಿತು. 2019ರಲ್ಲಿ ಅಷ್ಟು ದೊಡ್ಡ ಯಶಸ್ಸು ಸಿಗದಿದ್ದರೂ 62 ಸ್ಥಾನಗಳನ್ನು ಗೆದ್ದಿತ್ತು. ಕಳಕೊಂಡದ್ದು ಕೇವಲ 9 ಸ್ಥಾನಗಳನ್ನಾಗಿದ್ದರಿಂದ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಮಾತ್ರ 33ಕ್ಕೆ ಇಳಿದಿದೆ. ಇಂಡಿಯಾ ಒಕ್ಕೂಟ ದೊಡ್ಡ ಮಟ್ಟದಲ್ಲಿ ಖೆಡ್ಡಾ ತೋಡಿದೆ. ಅದೂ ಕೂಡ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಂತಹ ಸಾಧನೆ ಇಲ್ಲೆ ಆಗಿದ್ದರು ಬಿಜೆಪಿ ಮುಗ್ಗರಿಸಿದೆ. ಹಾಗಿದ್ರೆ ಬಿಜೆಪಿ ಮುಗ್ಗರಿಸಲು ಏನು ಕಾರಣ? ತಿಳಿಯೋಣ ಬನ್ನಿ.
* ಸಂಸದರ ಬಗ್ಗೆ ಅಸಮಾಧಾನ:
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೆ ಈ ಬಾರಿ ಮುಖ್ಯವಾಗಿ ಜನರ ಅಸಮಾಧಾನ ಇದ್ದುದು ತಾವು ಆಯ್ಕೆ ಮಾಡಿದ್ದ ಸಂಸದರ ಕಾರ್ಯವೈಖರಿ ಬಗ್ಗೆ. ಈ ಕಾರಣವನ್ನು ಅರಿತಿದ್ದ ಬಿಜೆಪಿ ಶೇ 30ರಷ್ಟು ಹಾಲಿ ಸಂಸದರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿತ್ತು. ಆದರೆ ಕೊನೇ ಕ್ಷಣಕ್ಕೆ ಕೇವಲ 14 ಹಾಲಿ ಸಂಸದರಿಗಷ್ಟೆ ಟಿಕೆಟ್ ತಪ್ಪಿಸಲಾಗಿತ್ತು. ಈ ಕಾರಣಕ್ಕೆ ಅಸಮಾಧಾನಗೊಂಡ ರೈತರು ಬಿಜೆಪಿ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು. ಈ ವಿರೋಧದ ಅಲೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬಿಜೆಪಿ ಎಡವಿತು. ರಾಮ ಮಂದಿರ ನಿರ್ಮಾಣ ನಮ್ಮ ಕೈ ಹಿಡಿಯುತ್ತೆ ಎಂಬ ಭ್ರಭೆಯಲ್ಲಿ ಅದು ತೇಲಾಡಿತು.* ಒಟ್ಟಾದ
ಅಲ್ಪಸಂಖ್ಯಾತರ ಮತ:
ಅಲ್ಪಸಂಖ್ಯಾತರ ಮತ ಬಿಜೆಪಿಗೆ ಬೀಳುವುದು ಕಡಿಮೆಯೇ. ಆದರೆ ಈವರೆಗೆ ವಿಪಕ್ಷಗಳಲ್ಲಿ ಹಂಚಿ ಹೋಗುತ್ತಿದ್ದುದರಿಂದ ಬಿಜೆಪಿಗೆ ಲಾಭವಾಗುತಿತ್ತು. ಆದರೆ ಈ ಬಾರಿ ಮಾತ್ರ ಅಲ್ಪಸಂಖ್ಯಾತರ ಮತಗಳೆಲ್ಲಾ ಸಂಘಟಿತವಾಗಿ ಇಂಡಿ ಒಕ್ಕೂಟಕ್ಕೆ ಬಿದ್ದಿದ್ದರಿಂದ ಬಿಜೆಪಿಗೆ ಭಾರೀ ನಷ್ಟವಾಯಿತು. ಜೊತೆಗೆ ವಿಪಕ್ಷಗಳು ಇಲ್ಲಿ ಒಬಿಸಿ ಮಂತ್ರವನ್ನು ಪಠಿಸಿತು. ಇದು ಗೊತ್ತಿದ್ದುದರಿಂದಲೇ ಬಿಜೆಪಿ ನಿರಂತರವಾಗಿ ಹಿಂದೂ ಜಪ ಮಾಡಿತ್ತು. ರಾಮಮಂದಿರ, ಕಾಶಿ ವಿಶ್ವನಾಥ ಮಂದಿರ, ಮಧುರಾ ಶ್ರೀಕೃಷ್ಣ ಜನ್ಮಭೂಮಿ ವಿಚಾರಗಳನ್ನು ಪದೇ ಪದೇ ಉಲ್ಲೇಖಿಸುತ್ತಿತ್ತು ಆದರೆ ಅದರಿಂದ ದೊಡ್ಡ ಮಟ್ಟಿನ ಪ್ರಯೋಜನವಾಗಲಿಲ್ಲ.
* ಸಂವಿಧಾನ ಬದಲಾವಣೆ, ಮೀಸಲಾತಿ ವಿಚಾರ
ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಾಯಿಸುತ್ತದೆ ಮತ್ತು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರೆ ಹಿಂದುಳಿದ ವರ್ಗ (OBC) ಗಳಿಗೆ ಇರುವ ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ವಿಪಕ್ಷಗಳು ಪ್ರಚಾರದ ವೇಳೆ ಒತ್ತಿ ಹೇಳಿದ್ದು ಬಿಜೆಪಿಗೆ ದೊಡ್ಡ ಮಟ್ಟಿಗೆ ಮುಳುವಾಯಿತು. ಬಿಜೆಪಿ ಯಾರ ಮೀಸಲಾತಿಯನ್ನೂ ಕಿತ್ತು ಹಾಕುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪದೇ ಪದೇ ಹೇಳಿದರೂ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಜನಸಾಮಾನ್ಯರ ಮುಂದೆ ಪಕ್ಷವನ್ನು ಸಮರ್ಥಿಸಿಕೊಳ್ಳಲು ವಿಫಲರಾದರು. ಕೊನೇ ಹಂತದವರೆಗೂ ಈ ಆರೋಪವನ್ನು ಬಿಜೆಪಿ ಸಮರ್ಥವಾಗಿ ಎದುರಿಸಲು ಸಾಧ್ಯವಾಗಲೇ ಇಲ್ಲ.