Bengaluru: ಬೆಂಗಳೂರಿನ ಬಸವೇಶ್ವರ ನಗರದ ವೆಲ್ಡಿಂಗ್ ಅಂಗಡಿಯಲ್ಲಿ ಸ್ಫೋಟ : ನಾಲ್ವರಿಗೆ ತೀವ್ರ ಗಾಯ
ಬೆಂಗಳೂರಿನಬಸವೇಶ್ವರ ನಗರದಲ್ಲಿರುವ ವೆಲ್ಡಿಂಗ್ ಅಂಗಡಿಯೊಂದರಲ್ಲಿ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆ. ಎಚ್. ಬಿ ಕಾಲೋನಿಯಲ್ಲಿ ವೆಲ್ಡಿಂಗ್ ಕೆಲಸಗಳಿಗಾಗಿ ಸಣ್ಣ ತಾತ್ಕಾಲಿಕ ಶೆಡ್ ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಿಲಿಂಡರ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಗಾಯಗೊಂಡವರಲ್ಲಿ ಮಾಲೀಕರಾದ ಜಾರ್ಜ್ ಮತ್ತು ಅವರ ಮೂವರು ಉದ್ಯೋಗಿಗಳು ಸೇರಿದ್ದಾರೆ. ಅಂಗಡಿಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರೊಂದು ಬೆಂಕಿಗೆ ಆಹುತಿಯಾಗಿ ಅರ್ಧ ಸುಟ್ಟು ಕರಕಲಾಗಿತ್ತು.
ಸಂಜೆ 5:30 ಕ್ಕೆ ಸ್ಫೋಟ ಸಂಭವಿಸಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ . ಅಂಗಡಿಯನ್ನು ನಡೆಸಲು ಮಾಲೀಕರು ಯಾವುದೇ ಪರವಾನಗಿ ಹೊಂದಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರಿಯ ಪ್ರಕಾರ, ವೆಲ್ಡಿಂಗ್ ಶಾಪ್ ನಲ್ಲಿ ಯಾವುದೇ ಅಗ್ನಿಶಾಮಕ ಸುರಕ್ಷತಾ ಉಪಕರಣಗಳು ಇರಲಿಲ್ಲ ಎಂದು ತಿಳಿಸಿದ್ದಾರೆ. ಈ ಘಟನೆಯ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಅಗ್ನಿ ಅವಘಡದ ಪ್ರಕರಣ ದಾಖಲಾಗಿದೆ.