Bengaluru: ಶಾಲಾ ಸಮಯದಲ್ಲಿ ಬದಲಾವಣೆ?! ಸರ್ಕಾರ ಕೊಡ್ತು ಬಿಗ್ ಅಪ್ಡೇಟ್
Bengaluru: ಬೆಂಗಳೂರಿನಲ್ಲಿ ಶಾಲೆಗಳು ಹಾಗೂ ಕೈಗಾರಿಕೆಗಳ ಆರಂಭದ ಸಮಯವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ ಗೆ ವರದಿಯನ್ನು ನೀಡಿದೆ.
ಹೌದು, ಕೆಲ ಸಮಯದ ಹಿಂದೆ ಸಮರ್ಪಣಾ ಸಾಂಸ್ಕೃತಿಕ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿಚಾರಣೆ ನಡೆಸಿ, ನಗರದಲ್ಲಿ ದಿನನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಶಾಲೆಗಳು ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆ ಮಾಡುವ ಕುರಿತು ಯೋಚಿಸಿ, ಸಾಧ್ಯವಾದರೆ ಮಾಡಿ ಎಂದು ಹೈಕೋರ್ಟ್(High court)ಸರಕಾರಕ್ಕೆ ಸಲಹೆ ನೀಡಿತ್ತು. ಆದರೀಗ ಬೆಂಗಳೂರು ನಗರದಲ್ಲಿ ಶಾಲೆ, ಕೈಗಾರಿಕೆಗಳ ಸಮಯ ಬದಲಾವಣೆ ಮಾಡೋದಕ್ಕೆ ಸಾಧ್ಯವಿಲ್ಲ ಅಂತ ಹೈಕೋರ್ಟ್ ಗೆ ರಾಜ್ಯ ಸರ್ಕಾರ ವರದಿಯನ್ನು ತಿಳಿಸಿದೆ.
ಅಂದಹಾಗೆ ಈ ಕುರಿತಂತೆ ವರದಿ ನೀಡಿರುವ ಶಿಕ್ಷಣ ಇಲಾಖೆಯು ಶಾಲೆಯನ್ನು ಬೇಗ ಆರಂಭಿಸುವುದಾದರೆ ಮಕ್ಕಳನ್ನು ಬೇಗ ಎದ್ದೇಳಿಸಬೇಕು. ಇದರಿಂದ ನಿದ್ರಾಹೀನತೆಯಂತ ಸಮಸ್ಯೆ ಎದುರಾಗೋ ಸಾಧ್ಯತೆ ಇದೆ. ಜೊತೆಗೆ ಆರೋಗ್ಯಕರ ಉಪಹಾರ ಸೇವನೆಗೂ ಸಮಯ ಸಿಗದಂತೆ ಆಗುತ್ತೆ. ಹೀಗಾಗಿ ಶಾಲೆಗಳ ಬಳಿಯಲ್ಲಿ ಜನದಟ್ಟಣೆ ಉಂಟಾಗದಂತೆ ಕ್ರಮ ವಹಿಸೋದಾಗಿ ವರದಿಯಲ್ಲಿ ತಿಳಿಸಿದೆ.
ಇನ್ನೂ ಕಾರ್ಮಿಕ ಇಲಾಖೆಯು ಕೈಗಾರಿಕೆಗಳ ಸಮಯ ಬದಲಾವಣೆಯಿಂದ ಸಂಚಾರ ದಟ್ಟಣೆ ಕಡಿಮೆ ಆಗೋದಿಲ್ಲ. ಶಿಫ್ಟ್ ಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರೋದರಿಂದ ದಟ್ಟಣೆ ಉಂಟಾಗೋದಿಲ್ಲ ಎಂಬುದಾಗಿಯೂ ವರದಿಯಲ್ಲಿ ಹೈಕೋರ್ಟ್ ನ್ಯಾಯಾಪೀಠಕ್ಕೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.