For the best experience, open
https://m.hosakannada.com
on your mobile browser.
Advertisement

Bengaluru: ಬೆಂಗಳೂರಿನಲ್ಲೊಬ್ಬರು ಪರಿವ್ರಾಜಕ, ನೆಮ್ಮದಿಯ ಹುಡುಕ ಹೊರಟವರಿಗೆ ಸಿಕ್ಕ ತಾಯಿ ಹೃದಯದ ಸನ್ಯಾಸಿ !

Bengaluru: 'ಮನುಷ್ಯನು ತನ್ನ ಕರ್ಮಗಳು, ಅನುಯಾಯಿಗಳು, ಸಂತತಿ ಅಥವಾ ಭೌತಿಕ ಸಂಪತ್ತಿನ ಮೂಲಕವಲ್ಲ; ಬದಲಿಗೆ ನಿರೀಕ್ಷೆಗಳಿಲ್ಲದ ತ್ಯಾಗದ ಮೂಲಕ ಅಮರತ್ವವನ್ನು ಸಾಧಿಸಬಹುದು'- ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಶ್ರೀ ಶ್ರೀ ಯೋಗೀಶ್ವರ ಸ್ವಾಮಿ
09:17 AM Jul 31, 2024 IST | ಸುದರ್ಶನ್
UpdateAt: 09:17 AM Jul 31, 2024 IST
bengaluru  ಬೆಂಗಳೂರಿನಲ್ಲೊಬ್ಬರು ಪರಿವ್ರಾಜಕ  ನೆಮ್ಮದಿಯ ಹುಡುಕ ಹೊರಟವರಿಗೆ ಸಿಕ್ಕ ತಾಯಿ ಹೃದಯದ ಸನ್ಯಾಸಿ
Advertisement

Bengaluru: "ಮನುಷ್ಯನು ತನ್ನ ಕರ್ಮಗಳು, ಅನುಯಾಯಿಗಳು, ಸಂತತಿ ಅಥವಾ ಭೌತಿಕ ಸಂಪತ್ತಿನ ಮೂಲಕವಲ್ಲ; ಬದಲಿಗೆ ನಿರೀಕ್ಷೆಗಳಿಲ್ಲದ ತ್ಯಾಗದ ಮೂಲಕ ಅಮರತ್ವವನ್ನು ಸಾಧಿಸಬಹುದು"- ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಶ್ರೀ ಶ್ರೀ ಯೋಗೀಶ್ವರ ಸ್ವಾಮಿ

Advertisement

ಬೆಂಗಳೂರಿನ ಗಗನಸ್ಪರ್ಶಿ ಬಿಲ್ಡಿಂಗ್ ಗಳ ನಡುವೆ, ವ್ಯಗ್ರ ಜನಸಾಗರದ ಮಧ್ಯೆ, ಸ್ವಯಂ ಸಮಯಕ್ಕೆ ಕಿಂಚಿತ್ತೂ ಬಿಡುವಿಲ್ಲದ ಕಾಲಚಕ್ರದಲ್ಲಿ ಶಾಂತಿಯ ವರದಾನವಾಗುವ ವಿಸ್ಮಯಕರ ತಾಣ ಒಂದರ ಅನ್ವೇಷಣೆ ನಡೆದಿದೆ. ಅದುವೇ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಶ್ರೀ ಶ್ರೀ ಯೋಗೀಶ್ವರ ಸ್ವಾಮಿಗಳ ಸನ್ನಿಧಾನ.

Advertisement

ಅವರದೊಂದು ಅವಧೂತ ಹಾದಿಯ ಶ್ರೇಷ್ಠ ನಡೆ. ಪವಾಡ ಮಾಡುವ ಎಲ್ಲರೂ ದೇವರಾಗುವುದಿಲ್ಲ ಎನ್ನುತ್ತಾರೆ. ಅಷ್ಟಕ್ಕೂ ದೇವರಾಗಲು ಪವಾಡ ಮಾಡಬೇಕೆಂದೇನೂ ಇಲ್ಲ; ತಾಯಿ ಹೃದಯ ಇದ್ದರೆ ಸಾಕು, ಆತನಲ್ಲಿ ದೈವಾಂಶ ಅಡಗಿದೆ ಎಂದೇ ಅರ್ಥ. ಮಕ್ಕಳ ಓರೆ ಕೋರೆ, ಮಕ್ಕಳ ಬೇಕು ಬೇಡ, ಮಕ್ಕಳ ನೋವು ನಲಿವು, ಮಕ್ಕಳ ಆಸೆ ಆಸಕ್ತಿ ಎಲ್ಲವನ್ನು ತಾಯಿ ಬಿಟ್ಟು ಬೇರಾರು ಅರ್ಥೈಸಿಕೊಳ್ಳಬಲ್ಲರು? ಹಾಗಾಗಿಯೇ ತಾಯಿಯು ದೇವರೆಂದೇ ಸೃಷ್ಟಿಯ ನಿಲುವು.

ಅಂಥದ್ದೊಂದು ತಾಯಿಹೃದಯಿಯ ಸಾಕ್ಷಾತ್ಕಾರದ ಒಂದಷ್ಟು ಅನುಭವಗಳನ್ನು ನಾನಿಲ್ಲಿ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಬೇಕಿದ್ರೆ ಪರೀಕ್ಷೆ ಮಾಡಿ ನೋಡಿ, ಥೇಟ್ ತಾಯಿಯಂತೆಯೇ; ಹೇಳದೆಯೇ ಎಲ್ಲವನ್ನೂ ಅರಿಯುವ, ಕೇಳದೆಯೇ ಎಲ್ಲವನ್ನೂ ಕೊಡುವ, ನಮ್ಮ ನಡುವೆಯೇ ಇದ್ದು ಇಲ್ಲದಂತಿರುವ ಶ್ರೀಗಳು ಅವರು. ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಶ್ರೀ ಶ್ರೀ ಯೋಗೀಶ್ವರ ಸ್ವಾಮಿಗಳು.

ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮಿ ಮಹಾಪೀಠವು 1400ಕ್ಕೂ ಹೆಚ್ಚು ವರ್ಷಗಳ ಹಿಂದಿನ ಪರಂಪರೆ ಹೊಂದಿದೆ. ಶ್ರೀ ಶ್ರೀ ಶ್ರೀ ಯೋಗೀಶ್ವರ ಸ್ವಾಮಿಗಳು ಸ್ಥಾಪಿಸಿದ ಜಗತ್ತಿನ ಮೊದಲನೇ ಪೀಠ ಕೂಡ ಇದೆ. ಶ್ರೀ ಆತ್ಮಾರಾಮ ಸ್ವಾಮಿಗಳು ಮೊದಲ್ಗೊಂಡು ಇಂದಿನವರೆಗೆ ಒಟ್ಟು 45 ಮಹಾತ್ಮರು ಈ ಮಠದ ಪೀಠವನ್ನು ಅಲಂಕರಿಸಿದ್ದಾರೆ. ಈ ಪರಂಪರೆಯಲ್ಲಿ ಗುರುಗಳ ಜೀವನವನ್ನು "ಗೃಹಸ್ಥ ಸನ್ಯಾಸಿ" ಎಂದು ವಿವರಿಸಲಾಗಿದೆ. ಇದು ಅವಧೂತ ಸಂಪ್ರದಾಯದ ಅಸಾಧಾರಣ ತತ್ವ. ಈ ಕಠಿಣ ಸಿದ್ಧಾಂತವನ್ನು ಪಾಲಿಸಿದ ಮತ್ತು ಅಪ್ರತಿಮ ಯಶಸ್ಸನ್ನು ಸಾಧಿಸಿದ ಕೆಲವೇ ಗುರುಗಳಲ್ಲಿ ಇಂದು ನಮ್ಮೊಡನೆಯೇ ಇರುವ ಶ್ರೀಗುರುಗಳು ಒಬ್ಬರು.

ಗುರುಗಳ ಹಿನ್ನೆಲೆ:
ಸುಮಾರು 40 ದಶಕಗಳ ಹಿಂದೆ, ದೇವರ ನಾಡೆಂದೇ ಹೆಸರುವಾಸಿಯಾಗಿರುವ ಕೇರಳದ ತಿರುವನಂತಪುರಂನಲ್ಲಿ ಶ್ರೀ ಜಯಾನಂದನ್ ಕೃಷ್ಣನ್ ಹಾಗೂ ಶ್ರೀಮತಿ ಅರುಣ ಕುಮಾರಿ ವಸುಮತಿ ದಂಪತಿಗೆ ಸುಪುತ್ರರೇ ಶ್ರೀಗುರು. ಗುರುಗಳ ಬಾಲ್ಯ ಸಾಮಾನ್ಯರಂತೆ ಸರಳವಾಗಿರಲಿಲ್ಲ. ಅವರು ತಮ್ಮ ಏಳನೇ ವಯಸ್ಸಿನಲ್ಲಿ ಮೂರ್ಛೆ ರೋಗದಿಂದ ಬಳಲುತ್ತಾ ಆಸ್ಪತ್ರೆಯಲ್ಲಿ ಸಾವಿನ ವಿರುದ್ಧ ಹೋರಾಡಿದವರು. ದೇವರ ಅನುಗ್ರಹವಿದ್ದರೆ ಸಾವು ತಾನೆ ಏನು ಮಾಡೀತು..!? ಗುರುಗಳು ಜಯಿಸಿದರು. ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದರು.
ಅದಾದ ಕೆಲವೇ ದಿನಗಳಲ್ಲಿ ಇಬ್ಬರು ಸನ್ಯಾಸಿಗಳ ಕಣ್ಣಿಗೆ ಗುರುಗಳು ಕಾಣುತ್ತಾರೆ. ಅವರನ್ನು ನೋಡಿ ಆ ಸನ್ಯಾಸಿಗಳಿಗೆ ವಿಸ್ಮಯ! ಗುರುಗಳ ಮುಖದಲ್ಲಿ ಪ್ರಕಾಶಮಾನವಾದ ಬೆಳಕು, ಚೈತನ್ಯ. ಹಿಂದೆಂದೂ ಕಂಡಿರದ ತೇಜಸ್ಸು! ತಕ್ಷಣವೆ ಮನೆ ಒಳಗಡೆ ಬರುತ್ತಾರೆ. ಗುರುಗಳ ತಂದೆತಾಯಿಗೆ ಮುಖಾಮುಖಿಯಾಗಿ “ಇವನು ಸಾಮಾನ್ಯನಲ್ಲ. ಶಿವನ ಪ್ರತಿರೂಪ. ಇವನನ್ನು ಗುರುಗಳ ಪಾದಾರವಿಂದಗಳಿಗೆ ಅರ್ಪಿಸಿ" ಎಂದಷ್ಟೇ ಹೇಳಿ, ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅಲ್ಲಿಂದ ಹೊರಟುಹೋಗುತ್ತಾರೆ.

ತಂದೆ ತಾಯಿಗೆ ಗೊಂದಲ ಉಂಟಾಗುತ್ತದೆ. ಅರೆ! ಹೀಗೆ ದಿಢೀರನೆ ಯಾರೋ ಸನ್ಯಾಸಿಗಳು ಬಂದು ಗುರುಗಳಿಗೆ ಅರ್ಪಿಸಿ ಎಂದರೆ ಹೇಗೆ? ಕರುಳ ಕುಡಿಯನ್ನು ಬಿಟ್ಟು ಹೇಗಿರುವುದು..? ಅಂತೆಲ್ಲಾ ಸಾಕಷ್ಟು ಚಡಪಡಿಕೆಗಳನ್ನು ಅನುಭವಿಸುತ್ತಾರೆ. ಆದರೆ ಸನ್ಯಾಸಿಗಳು ಹೇಳಿದ ಮಾತು ನೆನಪಾಗುತ್ತಲೇ ಇದೆ- “ಇವನು ಸಾಮಾನ್ಯನಲ್ಲ. ಸಾಕ್ಷಾತ್ ಶಿವನ ಸ್ವರೂಪ.”
ಕಡೆಗೂ ಮಗನನ್ನು ತಮ್ಮ ಮನೆಯಿಂದ ಸಮಾಜಕ್ಕೆ ಒಪ್ಪಿಸುವ ನಿರ್ಧಾರಕ್ಕೆ ಮನೆಯವರು ಬರುತ್ತಾರೆ. ಈತ ಕೇವಲ ಒಂದು ಮನೆಗಲ್ಲ, ಒಂದು ಊರಿಗಲ್ಲ.. ಒಂದಿಡೀ ಸಮಾಜಕ್ಕೆ ಈತನ ಅಗತ್ಯವಿದೆ ಎಂದರಿತು ಗುರುಗಳನ್ನು ಅಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ಬಿಡುತ್ತಾರೆ. ಆಗ ನಡಿಗೆ ಶುರು ಮಾಡಿದ್ದು, ನಡೆದರು ನಡೆದರು.. ಹೆಚ್ಚು ಕಡಿಮೆ ತಿಂಗಳಿಗೆ ಮೂರು ಸಾವಿರ ಕಿ.ಮೀ.. ನಡೆದೇ ನಡೆದರು. ಜನಜೀವನವನ್ನು ಹತ್ತಿರದಿಂದ ಕಂಡರು, ಜನರ ಕಷ್ಟಗಳನ್ನು ಅರಿತರು, ಜೀವನ ರೀತಿಗಳನ್ನು ಅನ್ವೇಶಿಸಿದರು. ಅದರ ಪರಿಣಾಮವೇ ಇಂದು ಬೇಡಿ ಬಂದ ಭಕ್ತರ ಪಾಲಿಗೆ ಕಾಮದೇನುವಾಗಿದ್ದಾರೆ.

ಗುರುಗಳು ಹತ್ತನೇ ವಯಸ್ಸಿನಲ್ಲಿಯೇ ದೈವೀಕ ದೃಷ್ಟಿಯಿಂದ ಮುನ್ನಡೆಯುವ ಘಟನೆಗಳನ್ನು ನೋಡಲಾರಂಭಿಸಿದರು ಅಂದ್ರೆ ಆಶ್ಚರ್ಯವೆನಿಸಬಹುದು. ಆದ್ರೂ ಇದು ಸತ್ಯ; ತಮ್ಮ ಹದಿನಾರನೇ ವಯಸ್ಸಿನಲ್ಲಿ ಇಡೀ ಆಧ್ಯಾತ್ಮಿಕ ಜಗತ್ತು ಇವರೆಡೆಗೆ ಬೆರಗುಗಣ್ಣಿನಿಂದ ನೋಡಲಾರಂಭಿಸಿತು.
ಅಂತರ್ಜಾಲವಿಲ್ಲದ ಕಾಲದಲ್ಲಿ ಶ್ರೀರಾಮನು ಸೀತೆಯನ್ನು ಹುಡುಕಿದಂತೆ ಗುರುಗಳು ತಮ್ಮ ಗುರುಗಳನ್ನು ಹುಡುಕುತ್ತಾ ಕೇರಳದಿಂದ ತಮಿಳುನಾಡಿನ ಮರುತುವಾಮಲೈ ಎಂಬ ಬೆಟ್ಟಕ್ಕೆ ನಡೆದರು. ಅಲ್ಲಿ ಶ್ರೀಮತ್ ಪರಮಹಂಸ ಆನಂದ ಕಾಳಿದಾಸ ಸ್ವಾಮಿಗಳ ದರ್ಶನವಾಯಿತು. "ಆರು ಅರಿವನ್ನೂ ತುಂಬಿರುವಂತಹ ಶಿವಸ್ವರೂಪಿಗೆ ಕೊಡಲು ನನ್ನ ಬಳಿ ಏನೂ ಇಲ್ಲ" ಎಂದು ಆನಂದ ಕಾಳಿದಾಸ ಸ್ವಾಮಿಗಳು ಗುರುಗಳನ್ನು ಕಂಡು ಉದ್ಗರಿಸಿದರು. ಸ್ವಾಮಿಗಳ ಅನುಗ್ರಹದಿಂದ ಶ್ರೀ ಗುರುಗಳು ಆರು ತಿಂಗಳು ಏಳೂವರೆ ದಿವಸಗಳ ಕಾಲ ಲೌಕಿಕ ಜಗತ್ತಿನಿಂದ ಹೊರಬಂದು ಸಮಾಧಿ ಸ್ಥಿತಿಯಲ್ಲಿದ್ದರು.
ಶ್ರೀ ಗುರುಗಳ ಆರಂಭಿಕ ವರ್ಷಗಳ ಶಿಕ್ಷಣ ಒಂದು ರೀತಿ ಹೋರಾಟವಾಗೇ ಇತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮೂರು ಬಾರಿ ಬರೆದರು. ನಂತರ ನಾನಾ ವಿಶ್ವವಿದ್ಯಾನಿಲಯಗಳಿಂದ ಹಲವು ಪದವಿಗಳನ್ನು ಪಡೆದರು.

ಮೊದಲಿಗೆ ದುಡಿಯುವುದು ಅನಿವಾರ್ಯವಾಗಿತ್ತು. ಆಗಿನ್ನೂ ಪ್ರಾಪಂಚಿಕ ಬಂಧನದಿಂದ ಬಿಡುಗಡೆ ಹೊಂದಿರಲಿಲ್ಲ. ಹಾಗಾಗಿ ಗುರುಗಳು ಟಾಯ್ಲೆಟ್ ಕ್ಲೀನರ್ ನಂತಹ ಕೆಲಸದಿಂದ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಸ್ಟಿವಾರ್ಡ್, ಸ್ಟೋರ್ ಹೆಲ್ಪರ್, ಸ್ಟೋರ್ ಕೀಪರ್, f&b ಕಂಟ್ರೋಲರ್, ಕಂಪ್ಯೂಟರ್ ಆಪರೇಟರ್, ಥ್ರೀಡಿ ಡಿಸೈನರ್, ಥ್ರೀಡಿ ಮಾಡೆಲರ್, ಅನಿಮೇಷನ್, ಗ್ರಾಫಿಕ್ ಡಿಸೈನರ್, ಇಂಟೀರಿಯರ್ ಡಿಸೈನರ್, ಅಸಿಸ್ಟೆಂಟ್ ಆರ್ಕಿಟೆಕ್ಟ್, ಆರ್ಕಿಟೆಕ್ಟ್, ಪ್ರೊಫೆಸರ್, ಪೈಲೆಟ್ ಹಾಗೂ ಇನ್ನೂ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಅದಲ್ಲದೆ ತಮ್ಮ ಪರಿಶ್ರಮದಿಂದ ಆಕಾಶದೆತ್ತರಕ್ಕೆ ಏರಿ ದುಬೈನ ಉನ್ನತ ಅಧಿಕಾರಿಯಿಂದ ಚಿನ್ನದ ಪದಕವನ್ನು ಸಹ ಪಡೆದರು.
ಪ್ರತಿಭೆಗೆ ಸಿಕ್ಕ ಪುರಸ್ಕಾರವೆಂಬಂತೆ ಗುರುಗಳು ಸಾವಿರದಿಂ ಲಕ್ಷ ರುಪಾಯಿವರೆಗಿನ ಮಾಸಿಕ ವೇತನವನ್ನು ಪಡೆಯಲು ಶುರು ಮಾಡಿದರು. ಎಲ್ಲವೂ ಸರಿಯಾಗೇ ಇದ್ದರೆ ಗುರುವಿನ ಪಾತ್ರವಾದರೂ ಏನು..! ಹಾಗಾಗಿ ಅದೊಂದು ಕ್ಷಣ ತಾಯಿನಾಡಿಗೆ ಮರಳುವಂತೆ ಅವರ ಗುರುವಿನ ಆಜ್ಞೆಯಾಯಿತು. ಗುರುಗಳು ನಿಂತ ನಿಲುವಿನಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಆದೇಶವನ್ನು ಪಾಲಿಸಿ, ಎಲ್ಲವನ್ನು ತ್ಯಜಿಸಿ ತಮ್ಮ ತಾಯ್ನಾಡಿಗೆ ತೆರಳಲು ನಿರ್ಣಯಿಸಿದರು. 2009ರಲ್ಲಿ ಭಾರತಕ್ಕೆ ಮರಳಿದರು. ಭಾರತದಲ್ಲಿ ಅವರ ಅಧ್ಯಾತ್ಮ ಜೀವನ ಪ್ರಾರಂಭವಾಗಿದ್ದು ಕರುನಾಡಿನಲ್ಲೇ ಅನ್ನುವುದು ಹೆಮ್ಮೆಯ ವಿಷಯ.

ಆಗಲೇ ಗುರುಗಳು ಪ್ರತಿ ತಿಂಗಳು ಸುಮಾರು ಮೂರರಿಂದ ನಾಲ್ಕು ಸಾವಿರ ಕಿಲೋಮೀಟರುಗಳ ಪ್ರಯಾಣ ಮಾಡಲು ಪ್ರಾರಂಭಿಸಿದ್ದು, ಆಗಲೇ ಸಾವಿರಾರು ನೊಂದ ಜೀವಿಗಳು ಮುಖಾಮುಖಿಯಾದದ್ದು, ಆಗಲೇ ಭಕ್ತರ ನೋವುಗಳಿಗೆ ಸ್ಪಂದಿಸಿದ್ದು. ಸಣ್ಣ ಸಮಾಧಾನದಿಂದ ಹಿಡಿದು ಹೃದಯಾಘಾತ, ಕ್ಯಾನ್ಸರ್.. ಹೀಗೆ ಭೀಕರವಾದ ರೋಗಗಳನ್ನು ಕೂಡ ಗುರುಗಳು ಕ್ಷಣಮಾತ್ರದಲ್ಲಿ ಗುಣಪಡಿಸತೊಡಗಿದರು. ಆಗಲೇ ಸಹಸ್ರಾರು ಭಕ್ತರು ಗುರುಗಳ ಅನುಯಾಯಿಗಳಾಗಿದ್ದು. 2019ರಲ್ಲಿ ಶ್ರೀಗಳು ಸಹಸ್ರಾರಪೀಠವನ್ನೇರಿದರು. ಮಠದ 45ನೇ ಪೀಠಾಧಿಪತಿಯಾಗಿ ಜಗತ್ತನ್ನೇ ಬೆಳಗುವ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಯೋಗೀಶ್ವರ ಸ್ವಾಮಿಗಳಾದರು.

ಸಾಮಾಜಿಕ ಹಿತಚಿಂತನೆ:
ಗುರುಗಳು ಅಧ್ಯಾತ್ಮ ಪಥದಲ್ಲಿ ಸಾಗುತ್ತಿದ್ದರೂ ದುರ್ಬಲರು ಕಣ್ಣಿಗೆ ಬಿದ್ದರೆ ತಾಯಿಯಂತೆ ಸ್ಪಂದಿಸುವುದನ್ನು ಇಂದಿಗೂ ಬಿಟ್ಟಿಲ್ಲ. ಆರ್ಥಿಕವಾಗಿ ಹಿಂದುಳಿದ, ಓದಿನಲ್ಲಿ ಉತ್ತಮ ಸಾಧನೆ ಮಾಡಿರುವ ಹಲವಾರು ವಿದ್ಯಾರ್ಥಿಗಳು ಮಠದ ವತಿಯಿಂದ ವಿದ್ಯಾರ್ಥಿ ವೇತನ ಪಡೆದು ಭವ್ಯ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ. ವೈದ್ಯಕೀಯ ಶಿಬಿರ, ಕಷ್ಟದಲ್ಲಿದ್ದವರಿಗೆ ಉಚಿತ ಔಷಧಿಗಳನ್ನು ಒದಗಿಸುವುದು ಗುರುಗಳ ನೆಚ್ಚಿನ ಕಾರ್ಯ. ಉಳಿದಂತೆ ಸಾಧುಸಂತರಿಗೆ ಪ್ರತಿ ತಿಂಗಳು ಎಣ್ಣೆ, ತುಪ್ಪ, ಅಕ್ಕಿ, ಅವಲಕ್ಕಿ ಮುಂತಾದ ನಿತ್ಯದ ದಿನಸಿಗಳನ್ನು ಸಮರ್ಪಿಸುವುದು ಕೂಡ ಅವರ ದಿನಚರಿಯ ಒಂದು ಭಾಗವೆ.

ಕೊರೋನಾ ಮಹಾಮಾರಿ ಎಲ್ಲೆಡೆ ಹರಡಿ ಜನರನ್ನು ಕಂಗೆಡಿಸಿದ್ದಾಗ, ಗುರುಗಳು ಉಚಿತವಾಗಿ ಅಷ್ಟಾಂಗ ಯೋಗ, ಪ್ರಾಣಾಯಾಮ ಮೊದಲಾದ ಯೋಗಾಭ್ಯಾಸಗಳನ್ನು ಆನ್ಲೈನ್ ಮುಖಾಂತರ ಹೇಳಿಕೊಟ್ಟರು. ಇದರಿಂದ ನಿರ್ಭಯ ಬದುಕನ್ನು ಬದುಕುತ್ತಿರುವ ಎಷ್ಟೋ ಮಂದಿ ಈಗಲೂ ಗುರುಗಳಿಗೆ ಕೃತ್ಞರಾಗಿದ್ದಾರೆ. ಇಷ್ಟೇ ಅಲ್ಲದೆ ಭಕ್ತರ ಸಂಕಷ್ಟಗಳನ್ನು ಪರಿಹರಿಸಲು ಗುರುವಾರ ಹಾಗು ಶನಿವಾರದಂದು ಶ್ರೀ ಗುರುಗಳ ಲಭ್ಯದ ಮೇರೆಗೆ, ಆಶೀರ್ವಚನವು ಕೈಗೊಳ್ಳುವುದು. ಅಲ್ಲಿ ದುಃಖ ದುಮ್ಮಾನಗಳೆಲ್ಲ ಮರೆಯಾಗಿ, ಆಧ್ಯಾತ್ಮಿಕ ಆನಂದದ ಸ್ನಾನದಲ್ಲಿ ಮನಸ್ಸು ತುಳುಕುತ್ತದೆ. ಪ್ರತಿ ಗುರುವಾರದಂದು, ಮಹಾಪ್ರಸಾದದ ವಿತರಣೆ, ಪರಮಾತ್ಮನ ಪ್ರೇಮದ ರಸದೌತಣ. ಜಾತಿ ಧರ್ಮಗಳ ಗೋಡೆಗಳು ಕುಸಿದು ಒಂದುತನದ ಸಮಾನತೆ. ಹಣ್ಣು ತರಕಾರಿ ವ್ಯಾಪಾರಿಗಳಿಗೂ ಮಹಾಸ್ವಾಮಿಯ ಪ್ರೇಮದ ತುಣುಕು ಮಹಾಪ್ರಸಾದದ ರೂಪದಲ್ಲಿ ದೊರಕ್ಕುತ್ತದೆ.

ಇದಿಷ್ಟು ನನಗಾದ ಸಾಕ್ಷಾತ್ಕಾರದ ಸಂಕ್ಷಿಪ್ತ ಪರಿಚಯ. ನನ್ನಂತೆ ಇನ್ನೂ ಅದೆಷ್ಟು ಮಂದಿ ಇದ್ದಾರೋ ಗೊತ್ತಿಲ್ಲ; ಆ ಎಲ್ಲರ ಅಭಿಪ್ರಾಯ ಕೂಡ ಒಂದೇ; ಗುರುಗಳು ನಮ್ಮೆಲ್ಲರ ಬದುಕಿನ ಧ್ರುವತಾರೆ. ಹಾಗಾಗಿ ಗುರುಗಳ ಪ್ರವಚನಮಾಲೆಯನ್ನು ಸಂಚಿಕೆಗಳ ರೂಪದಲ್ಲಿ ನಾನಿಲ್ಲಿ ಪ್ರಸ್ತುತಪಡಿಸಲಿದ್ದೇನೆ. ಅವಧೂತ ಅಂದ್ರೆ ಎಲ್ಲೋ ಹಿಮಾಲಯದ ಗುಹೆಯಲ್ಲಿ ಕುಳಿತು ಮೈಮರೆಯುವವನಲ್ಲ; ಇಲ್ಲೇ ನಮ್ಮ ನಡುವೆಯೇ ಇದ್ದು, ಎಲ್ಲರ ಕಷ್ಟ ಕಾಯುವವನು. ಇದನ್ನೇ ಶ್ರೀ ಶ್ರೀ ಶ್ರೀ ಯೋಗೀಶ್ವರ ಸ್ವಾಮಿಗಳು ಅನುಸರಿಸಿಕೊಂಡು ಬರುತ್ತಿರುವುದು. ಅದನ್ನೇ ನಾನು ನಿಮ್ಮ ಜೊತೆ ಹಂಚಿಕೊಳ್ಳಲು ಇಚ್ಛಿಸುವುದು.ಬನ್ನಿ ಜೊತೆಯಾಗಿ, ನಿಮಗೂ ಶ್ರೀ ಗುರುಗಳ ದರ್ಶನ ಆದೀತು.

ಬರಹ: ಸೌಧಾಮಿನಿ ಎಂ.ವಿ

Advertisement
Advertisement
Advertisement