Belthangady: ಇಂಜಿನಿಯರಿಂಗ್ ಮಾಡಿದರೂ ಕೆಲಸ ದೊರಕಿಲ್ಲ; ನೊಂದ ಯುವಕ ಆತ್ಮಹತ್ಯೆಗೆ ಯತ್ನ!!!
Belthangady: ಇಂಜಿನಿಯರಿಂಗ್ ವ್ಯಾಸಂಗ ಮಾಡಿದ ಪದವೀಧರನೊಬ್ಬ ತನ್ನ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಇಂಜಿನಿಯರಿಂಗ್ ಮುಗಿಸಿದ ಯುವಕನೊಬ್ಬ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಜ.6 ರಂದು ಕುತ್ತಿಗೆಗೆ ಚೂರಿ ಇರಿದು ಆತ್ಮಹತ್ಯೆಗೆ (Suicide)ಯತ್ನಿಸಿದ್ದು, ಸಾರ್ವಜನಿಕರ ಮಾಹಿತಿಯ ಮೇರೆಗೆ ಪೊಲೀಸರು (Police)ರಕ್ಷಣೆ ಮಾಡಿ ಬೆಳ್ತಂಗಡಿ(Belthangady) ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಮಾದಾವರ ನಿವಾಸಿ ನಾರಾಯಣಪ್ಪ ಮಗ ಹಿತೇಶ್ (24) ಎಂಬ ಯುವಕ ಎನ್.ಕೆ.ಐ.ಡಿ ಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ್ದಾನೆ. 2022 ರಲ್ಲಿ ಆರು ತಿಂಗಳ ಐಟಿ ಕೋರ್ಸ್ ಮಾಡಿ, ಐ.ಎನ್.ಸಿ ಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು ಕೂಡ ಸರಿಯಾದ ಸಂಬಳ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ ಮೂಲಕ ಜ.6 ರಂದು ಬೆಳಗ್ಗೆ ಬಂದು ಧರ್ಮಸ್ಥಳ - ಕೊಕ್ಕಡ ರಸ್ತೆಯ ಕಲ್ಲೇರಿ ಪೆಟ್ರೋಲ್ ಪಂಪ್ ಬಳಿಯ ರಸ್ತೆ ಪಕ್ಕದಲ್ಲಿ ಹೋಗಿ ಬ್ಯಾಗ್ ನಲ್ಲಿ ತಂದಿದ್ದ ಚೂರಿಯಿಂದ ಕುತ್ತಿಗೆಯನ್ನು ಇರಿದುಕೊಂಡು ರಕ್ತ ಸ್ರಾವದಿಂದ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದನ್ನು ಗಮನಿಸಿದ ಸಾರ್ವಜನಿಕರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಸಿಬ್ಬಂದಿಗಳು ಬಂದು ಆಂಬುಲೆನ್ಸ್ ಸೇವೆ ಸಿಗದೇ ಪೊಲೀಸ್ ಜೀಪ್ ಮೂಲಕ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಹಿತೇಶ್ ಕುತ್ತಿಗೆ ಭಾಗಕ್ಕೆ ಚೂರಿಯಿಂದ ಇರಿದುಕೊಂಡಿದ್ದರಿಂದ ಸರಿಯಾದ ಸಮಯಕ್ಕೆ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ ಹಿನ್ನೆಲೆ ಸದ್ಯ, ಹಿತೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.