Bantwala: ಬಾವಿಗೆ ಬಿದ್ದ ಮಗು ರಕ್ಷಿಸಿದ ಯುವಕ : ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ವ್ಯಾಪಕ ಶ್ಲಾಘನೆ
Bantwala: ಬಾವಿಗೆ ಬಿದ್ದ ಮಗುವನ್ನು ತನ್ನ ಪ್ರಾಣದ ಹಂಗು ತೊರೆದು ಬಾವಿಗೆ ಇಳಿದು ರಕ್ಷಿಸಿದ ಯುವಕನ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: Arecanut Problem: ಅಡಿಕೆ ಬೆಲೆ ಏರುವ ಸಮಯದಲ್ಲೇ ರೈತರಿಗೆ ಬೆಳೆ ಉಳಿಸುವ ಸಂಕಷ್ಟ!
ತಾಲೂಕಿನ ಸರಪಾಡಿಯ ಹಂಚಿಕಟ್ಟೆಯ ನೋಣಯ್ಯ ನಾಯ್ಕ ಎಂಬವರ ಪುತ್ರ 3 ವರ್ಷದ ಅಭಿಷೇಕ್ ರಕ್ಷಿಸಲ್ಪಟ್ಟ ಮಗು.ಉಮೇಶ್ ಮಠದಬೆಟ್ಟು ಎಂಬ ಯುವಕ ಮಗು ರಕ್ಷಿಸಿದ ಸಾಹಸಿ.
ಸರಪಾಡಿಯ ಹಂಚಿಕಟ್ಟೆಯ ನೋಣಯ್ಯ ನಾಯ್ಕ ಅವರ ಮನೆಯ ಅಂಗಳದಲ್ಲಿ ಬಾವಿಯೊಂದಿದ್ದು, ಅದಕ್ಕೆ ಕಸ ಬೀಳದಂತೆ ಹಸಿರು ಬಣ್ಣದ ನೆಟ್ ಕಟ್ಟಿದ್ದು, ಮೇ 14ರಂದು ಸಂಜೆ ಅವರ ಪುತ್ರ ಅಭಿಷೇಕ್ (೩) ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದಾಗ ಬಾವಿಯ ಕಟ್ಟೆಯನ್ನು ಹತ್ತಿ ನೆಟ್ ಮೇಲೆ ಕೂತಿದೆ.ನೆಟ್‌ನ ಮಧ್ಯಕ್ಕೆ ತಲುಪಿದಾಗ ಅದು ಭಾರದಿಂದ ಹರಿದಿದೆ. ಈ ವೇಳೆ ಮಗು ಏಕಾಏಕಿ ಬಾವಿಗೆ ಬಿದ್ದಿದೆ.
ತಾಯಿ ಮನೆಯೊಳಗೆ ಇದ್ದು, ತಂದೆ ನೋಣಯ್ಯ ಅವರು ಕೆಲಸ ಮುಗಿಸಿ ಬಂದು ಹೊರಗೆ ಹೋಗಿದ್ದರು. ನೀರಿಗೆ ಏನೋ ಬಿದ್ದ ಶಬ್ದ ಕೇಳಿ ಓಡಿ ಬಂದು ನೋಡಿದಾಗ ಮಗು ನೀರಿಗೆ ಬಿದ್ದಿದೆ.
ಮಗುವಿನ ತಾಯಿ ಬೊಬ್ಬೆ ಹಾಕಿದಾಗ ಉಮೇಶ್ ಮಠದಬೆಟ್ಟು ಎಂಬ ಯುವಕ ಧಾವಿಸಿ ಅಲ್ಲೇ ಇದ್ದ ಹಗ್ಗದಲ್ಲಿ ಇಳಿದು ಬಾವಿಯಲ್ಲಿ ನೀರಿನಲ್ಲಿ ಮಗುವನ್ನು ಎತ್ತಿ ಹಿಡಿದಿದ್ದಾರೆ. ಬಳಿಕ ಮಗುವಿನ ತಂದೆ ಬಂದು ಮಗುವನ್ನು ಹಗ್ಗದ ಮೂಲಕ ಮೇಲಕ್ಕೆ ಎತ್ತಿದ್ದಾರೆ. ಬಾವಿಯಲ್ಲಿ ಮಗುವಿನ ಕತ್ತಿನವರೆಗೆ ನೀರಿದ್ದು, ಉಮೇಶ್ ಇಳಿಯುವ ವೇಳೆ ಮಗು ನೀರಿನಲ್ಲಿ ನಿಂತಿದ್ದ ಎನ್ನಲಾಗಿದೆ.
ಜೀವದ ಹಂಗು ತೊರೆದು ಮಗುವಿನ ರಕ್ಷಣೆ ಮಾಡಿದ ಉಮೇಶ್ ಅವರ ಸಾಹಸಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.