Mangaluru: ಪೂರ್ವ ಮುಂಗಾರು ಗಾಳಿ-ಮಳೆ ಆರಂಭವಾದ ಬೆನ್ನಲ್ಲೇ ಮೆಸ್ಕಾಂಗೆ 9.63 ಕೋ.ರೂ.ಗೂ ಅಧಿಕ ನಷ್ಟ
Mangaluru: ಪೂರ್ವ ಮುಂಗಾರು ಗಾಳಿ ಮಳೆಗೆ ವಿದ್ಯುತ್ ಕಂಬಗಳು ಪರಿವರ್ತಕಗಳು ಸೇರಿದಂತೆ 9.63 ಕೋ.ರೂ. ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ.
ಮೆಸ್ಕಾಂ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿದ್ದು 2024ರ ಎ.1 ರಿಂದ ಮೇ 31ರ ವರೆಗಿನ ಅವಧಿಯಲ್ಲಿ ಗಾಳಿ ಮಳೆಗೆ ಚಿಕ್ಕಮಗಳೂರು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ.
ಇದನ್ನೂ ಓದಿ: ಕರಿಬೇವು ಎಲೆಯನ್ನು ಈ ರೀತಿ ಸೇವಿಸಿ ನೋಡಿ! ನಿಮ್ಮ ದೇಹದ ಹತ್ತು ಹಲವು ಸಮಸ್ಯೆ ನಿವಾರಣೆ ಆಗಲಿದೆ!
ಚಿಕ್ಕಮಗಳೂರು ಜಿಲ್ಲೆಯಲ್ಲಿ 353.01 ಲಕ್ಷ ರೂ. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 241.72 ಲಕ್ಷ ರೂ. ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 200.79 ಲಕ್ಷ ರೂ. ಮತ್ತು ಶಿವಮೊಗ್ಗದಲ್ಲಿ 167.70 ಲಕ್ಷ ರೂ. ಮೊತ್ತದ ಮೆಸ್ಕಾಂ ಅಸ್ತಿಗಳು ಹಾನಿಗೊಂಡಿವೆ. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಗಿರುವ ಹಾನಿಗಳನ್ನು ಸರಿಪಡಿಸಿ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯವನ್ನು ಮೆಸ್ಕಾಂ ಮಾಡುತ್ತದೆ.
ಬರೋಬ್ಬರಿ 5,883 ಕಂಬಗಳು ಧರಾಶಾಯಿ
ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ ಗಾಳಿ ಮಳೆಗೆ ಒಟ್ಟು 5883 ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚಿನ 2066 ಕಂಬಗಳಿಗೆ ಹಾನಿಯಾಗಿದೆ. ಶಿವಮೊಗ್ಗದಲ್ಲಿ 1564, ದಕ್ಷಿಣ ಕನ್ನಡದಲ್ಲಿ 1306, ಉಡುಪಿ ಜಿಲ್ಲೆಯಲ್ಲಿ 947 ಕಂಬಗಳಿಗೆ ಹಾನಿಯಾಗಿದೆ. ಹಾನಿಗೊಂಡಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ.
ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 165 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿವೆ. ದಕ್ಷಿಣ ಕನ್ನಡದಲ್ಲಿ 26, ಉಡುಪಿ ಜಿಲ್ಲೆಯಲ್ಲಿ 20, ಶಿವಮೊಗ್ಗದಲ್ಲಿ 119 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿವೆ. ವಿದ್ಯುತ್ ಪರಿವರ್ತಕಗಳಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಹಾನಿ ಸಂಭವಿಸಿದೆ. ಹಾನಿಗೊಂಡಿರುವ ಪರಿವರ್ತಕಗಳನ್ನು ದುರಸ್ತಿ ಹಾಗೂ ಬದಲಾವಣೆ ಮಾಡಲಾಗಿದೆ.
ಮುಂಗಾರು ಗಾಳಿ, ಮಳೆಗೆ 157.72 ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65.30 ಕಿ.ಮೀ. ವಿದ್ಯುತ್ ಮಾರ್ಗ ಹಾನಿಗೊಂಡಿದ್ದು ಉಡುಪಿ ಜಿಲ್ಲೆಯಲ್ಲಿ 18.56 ಕಿ.ಮೀ. ವಿದ್ಯುತ್ ಮಾರ್ಗ ಹಾನಿಗೊಳಗಾಗಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 41.32 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 31.54 ಕಿ.ಮೀ. ವಿದ್ಯುತ್ ಮಾರ್ಗ ಹಾನಿಗೊಂಡಿದ್ದು ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ: Puttur: ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ!