Mobile Phone: ಮೊಬೈಲ್ ಫೋನ್ ಚಾರ್ಜ್ ಹಾಕುವ ವೇಳೆ ಶಾಕ್ ಹೊಡೆದು ಯುವಕ ಸಾವು!
Mobile Phone: ಮೊಬೈಲ್ ಚಾರ್ಜ್ ಹಾಕುವ ವೇಳೆ ಆದಷ್ಟು ಜಾಗರೂಕರಾಗಿರುವುದು ಸೂಕ್ತ. ಕಾರಣ, ಯುವಕನೊಬ್ಬ ಒದ್ದೆ ಕೈಯಲ್ಲಿ ಮೊಬೈಲ್ (Mobile Phone) ಚಾರ್ಜ್‌ಗೆ ಹಾಕುವಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೀದರ್ ಮೂಲದ 23 ವರ್ಷದ ಶ್ರೀನಿವಾಸ್ ಎಂಬಾತ ಕಂಪ್ಯೂಟರ್ ಕೋರ್ಸ್ ವ್ಯಾಸಂಗ ಮಾಡಲು ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ವೆಸ್ಟ್‌ಆಫ್ ಕಾರ್ಡ್ ರಸ್ತೆಯ ಪೇಯಿಂಗ್ ಗೆಸ್ಟ್ ಪಿ.ಜಿಯಲ್ಲಿ ನೆಲೆಸಿದ್ದ. ಈತ ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಶೌಚಾಲಯಕ್ಕೆ ಹೋಗಿ ವಾಪಾಸ್ ಬಂದು ಒದ್ದೆ ಕೈಯಲ್ಲಿ ಮೊಬೈಲ್ ಚಾರ್ಜ್‌ಗೆ ಹಾಕಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್ ಪ್ರವಹಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಶ್ರೀನಿವಾಸ್‌ನನ್ನು ಕಂಡು ಸ್ನೇಹಿತರು ಮುಟ್ಟಿ ಎಚ್ಚರಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ. ಬಳಿಕ ರೂಮ್‌ನ ವಿದ್ಯುತ್ ಸ್ಥಗಿತಗೊಳಿಸಿ, ಕೂಡಲೇ ಶ್ರೀನಿವಾಸ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಶ್ರೀನಿವಾಸ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸದ್ಯ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೆಲವು ಮಾದರಿಗಳನ್ನು ಸಂಗ್ರಹಿಸಿದೆ. ಸದ್ಯ ಶನಿವಾರ ಶ್ರೀನಿವಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.