Snake Bite: ಸತ್ತು ಬೂದಿಯಾದರೂ ದ್ವೇಷ ಬಿಡದ ನಾಗರ ಹಾವು! ಏನಿದು ವಿಚಿತ್ರ ಘಟನೆ?
Snake Bite: ನಾಗರ ಹಾವಿನ ದ್ವೇಷ ಎಂತಹದು ಅನ್ನೋದು ಊಹಿಸೋಕು ಸಾಧ್ಯವಿಲ್ಲ. ಅದಕ್ಕೆ ಸಾಕ್ಷಿಯಾಗಿ ಮಂಜೇಶ್ವರದಲ್ಲಿ ಆಶ್ಚರ್ಯ ಘಟನೆಯೊಂದು ಸಂಭವಿಸಿದೆ. ಹೌದು, ನಾಗರ ಹಾವಿನ ಕಡಿತದಿಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದ ಬಳಿಕ ಅವರ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಈ ಘಟನೆಯು ಕುಟುಂಬ ಹಾಗೂ ಸಂಬಂಧಿಕರಿಗೆ ಅಚ್ಚರಿ ಜೊತೆಗೆ ಆತಂಕವನ್ನೂ ಸೃಷ್ಟಿಸಿದೆ.
ಜುಲೈ 3 ರಂದು ಕುರುಡಪದವು ಪೈವಳಿಕೆ ನಿವಾಸಿ ದಿ|ಮಾಂಕು ಅವರ ಪತ್ನಿ ಚೋಮು(64) ಎಂಬವರು ಬುಧವಾರ ರಾತ್ರಿ ಮನೆಯೊಳಗೆ ನಿದ್ರಿಸಿದ್ದ ಸಂದರ್ಭದಲ್ಲಿ ರಾತ್ರಿ 12 ಗಂಟೆ ವೇಳೆ ಹಾವು ಕಡಿದಿದ್ದು (Snake Bite) , ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲು ಸಾಧ್ಯವಾಗಿರಲಿಲ್ಲ. ನಂತರ ಚೋಮು ಅವರ ಅಂತ್ಯ ಸಂಸ್ಕಾರ ಗುರುವಾರ ನಡೆಸಲಾಗಿತ್ತು. ಆ ಬಳಿಕ ರಾತ್ರಿ ವೇಳೆ ಸಂಪ್ರದಾಯ ಪ್ರಕಾರ ಮನೆಯ ಚಾವಡಿಯಲ್ಲಿ ಬೂದಿ ಹರಡಿ ಅದರ ಮಧ್ಯೆ ಚೊಂಬಿನಲ್ಲಿ ನೀರು ಇಡಲಾಗಿತ್ತು.
ಆದರೆ ಮನೆಯ ಬಾಗಿಲುಗಳನ್ನು ಭದ್ರಪಡಿಸಿ ಮನೆ ಮಂದಿ ಸಹಿತ ನಾಲ್ಕು ಮಂದಿ ಜಗಲಿಯಲ್ಲಿ ನಿದ್ದೆ ಮಾಡಿದ್ದರು. ಮರುದಿವಸ ಜು.5 ರಂದು ಬೆಳಗ್ಗೆ ಎದ್ದು ನೋಡಿದಾಗ ಬೂದಿ ಮೇಲೆ ಹಾವು ಹರಿದ ಗುರುತು ಹಾಗು ಚೊಂಬಿನಲ್ಲಿದ್ದ ನೀರಿನ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ.
ಮನೆಯವರ ಹೇಳಿದಂತೆ ಚೋಮು ಅವರಿಗೆ ಕಡಿದ ನಾಗರಹಾವನ್ನು ಗುರುವಾರ ಬೆಳಗ್ಗೆ ಹಿಡಿದು ಕೊಂಡೊಯ್ದು ದೂರದ ಅರಣ್ಯದಲ್ಲಿ ಬಿಡಲಾಗಿತ್ತು. ಅಲ್ಲದೆ ಮನೆಯೊಳಗೆ ಬೇರೆ ಹಾವು ಇಲ್ಲವೆಂದು ಖಚಿತಪಡಿಸಲಾಗಿತ್ತು. ಆದರೆ ಬೂದಿಯ ಮೇಲೆ ಹಾವಿನ ಸಂಚಾರ ಗುರುತು ಕಂಡು ಬಂದಿದ್ದು, ಅಚ್ಚರಿಗೆ ಕಾರಣವಾಗಿದೆ. ಸದ್ಯ ಹಾವಿನ ಸಂಚಾರದ ಗುರುತು ಹೇಗೆ ಉಂಟಾಯಿತು ಎಂಬುದು ಮನೆಯವರ ಆತಂಕ ಆಗಿದೆ.